Tuesday, July 20, 2010

ಬೇಂದ್ರೆಯವರ ಸರಸ್ವತೀ ಕಾಣ್ಕೆ

ಬೇಂದ್ರೆಯವರ ‘ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ.

ಬಾರೆ ಬಾ ಮಹೇಶ್ವರೀ

ಬಾ, ಬಾ, ಬಾ, ಬಾ.

ಬಾರೆ ಬಾ ಮಹೇಶ್ವರೀ

ಮಹಾಕಾಳಿ, ಮಹಾಲಕ್ಷ್ಮಿ

ಬಾ ಮಹಾಸರಸ್ವತೀ

ಇಹುದು ನಿಮಗೆ ಶಾಶ್ವತಿ

‘ಗಾಯತ್ರೀ ಸೂಕ್ತ’ ಕವನದಲ್ಲಿ ‘ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾP’ ಎಂಬ ಸಾಲು ಇಡೀ ವಿಶ್ವಸಾಹಿತ್ಯಕ್ಕೇ ಸರಸ್ವತಿಯನ್ನು ಅಧಿದೇವತೆಯೆಂಬುದನ್ನು ಸೂಚಿಸುತ್ತದೆ. ‘ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ’ ಎಂಬ ಸಾಲು ‘ಕವಿಕುಲದೇವತೆ’ ಸರಸ್ವತಿಯನ್ನು ಮತ್ತು ದಶಭುಜ ಸರಸ್ವತಿಯ ಶಿಲ್ಪವನ್ನು ನೆನಪಿಸುತ್ತದೆ.

‘ಸರಸ್ವತಿ’ ಎಂಬ ಕವನದಲ್ಲಿ, ವಿಷ್ಣುವಿನ ನಾಭಿಯಿಂದ ಹ್ಮಟ್ಟಿದ, ಕಮಲಾಸನದಲ್ಲಿ ಕುಳಿತ, ನಾಲ್ಕು ಮುಖದ ಬ್ರಹ್ಮ ನಾಲ್ಕು ವೇದಗಳನ್ನು ಸೃಷ್ಟಿಸಿ ಹಾಡತೊಡಗಿದಾಗ ‘ಓಂ’ಕಾರ ಸ್ವರೂಪದ ಸರಸ್ವತಿಯು ಶಂಖವನೂದಿದಂತೆ ಹೊರಟಿತು ಎನ್ನುತ್ತಾರೆ. ಹಾಗೆ ಹೊರಟ ಸರಸ್ವತಿಯು ಸರ್ವವನ್ನೂ ವ್ಯಾಪಿಸುತ್ತಾ ಬಂದಾಗ ಕವಿ ಬೇಂದ್ರೆಯವರು,

ನಾಚು ಮಾಡುತ ಬಂದು ವರದ ಹಸ್ತವನಿಟ್ಟ ಬಾಗಿಸಿದ ತಲೆಯ ಮೇಲೆ


...............ಹಚ್ಚೆ ಸತ್ಯ ತತ್ವದ ದೀಪವಾನಂದವನ್ನು ಬೀರೆ

ಎಂದು ಸ್ವಾಗತಿಸುತ್ತಾರೆ.

‘ಸರಸ್ವತೀ ಸೂಕ್ತ’ ಕವನದ

ಅಂಚೆ ಏರಿ ನೀರಿನಾಕೆ

ಗಾಳಿಯಲ್ಲಿ ಸುಳಿದಳೋ

ಬೆಳಕಿನಲ್ಲಿ ಬೆಳೆದಳೋ

ಎಂಬ ಸಾಲು ಸರಸ್ವತಿಯ ಸಾರ್ವತ್ರಿಕತೆಯನ್ನು ಮನಗಾಣಿಸುತ್ತದೆ. ನೀರಿನಾಕೆ ಎಂಬ ಪದ ಸರಸ್ವತೀ ನದಿಯನ್ನು, ಗಾಳಿಯಲ್ಲಿ ಸುಳಿದಳೋ ಎಂಬುದು ಉಸಿರಿನ ಸಹಾಯದಿಂದ ಉತ್ಪತ್ತಿಯಾದ ಮಾತನ್ನು, ಬೆಳಕಿನಲ್ಲಿ ಬೆಳೆದಳೋ ಎಂಬುದು ಭಾಷೆಯ ಚಾಕ್ಷುಷರೂಪವಾದ ಬರವಣಿಗೆಯನ್ನು ಸೂಚಿಸುತ್ತವೆ. ಸರಸ್ವತಿಗಿರುವ ನದಿದೇವತೆ, ವಾಗ್ದೇವತೆ ಮತ್ತು ಭಾಷಾ ಎಂಬ ವಿಶೇಷಣಗಳನ್ನು ಅನುಸರಿಸಿ ಮೇಲಿನ ಪರಿಕಲ್ಪನೆ ಮೂಡಿದೆ. ಸರಸ್ವತಿಯ ಪರಿಕಲ್ಪನೆ ವಿಕಾಸವಾದ ಮೂರು ಮುಖ್ಯ ಹಂತಗಳನ್ನು ಈ ಸಾಲುಗಳು ಧ್ವನಿಸುತ್ತವೆ.

‘ನೀನಾದಿನೀ-ದೇವತಾ ಸರಸ್ವತಿ’ ಕವನದ

....... ಆ ಸ್ವಾದಿನೀ
ವಾಜಿನಿ

ಜೀವಾಜಿನೀ
ವಾಜಿನೀವತೀ
ಸರಸ್ವತೀ

ರಸಸಾರಸ
ಹಂಸೀ
ತಮಧ್ವಂಸೀ

ಉತ್ತಮಾ
ಆದಿಮಾ
ಮಾ
ಆದತೀ

ಎಂಬ ಸಾಲುಗಳು, ವೇದದಲ್ಲಿ ಕಂಡುಬರುವ ಸರಸ್ವತಿಯನ್ನು ಚಿತ್ರಿಸುತ್ತವೆ. ಋಗ್ವೇದದ ಏಳನೇ ಮಂಡಲದ ೯೫ ಮತ್ತು ೯೬ನೇ ಸೂಕ್ತಗಳು ಈ ಪದ್ಯಕ್ಕೆ ಪ್ರೇರಣೆಯಾಗಿರುವಂತೆ ತೋರುತ್ತದೆ. ವಾಜಿನೀವತೀ ಎಂದರೆ ಒಳ್ಳೆ ಅನ್ನವನ್ನು ಕೊಡುವವಳು ಎಂದರ್ಥ; ಅವಳೇ ನದಿದೇವತೆ ಸರಸ್ವತಿ.

ವೇದದಿಂದ ಪ್ರೇರಿತವಾಗಿರುವ ಮತ್ತೊಂದು ಕವಿತೆ ‘ಶಾರದೆಯೇ!’ ಎಂಬುದು.

ವೇದದ ಮಂತ್ರವ ವಾದವ ಮಾಡುವ ತಲೆಯಲ್ಲಿ

ನೀರೋ ನೀರೆಯೋ ಎನುವೊಲು ಇಹೆ ರಸ ಶಿಲೆಯಲ್ಲಿ

ಇಲ್ಲಿ ‘ನೀರೋ ನೀರೆಯೋ’ ಎಂಬುದು ನದಿಯೋ ನದೀದೇವತೆಯೋ ಎಂಬುದನ್ನು ಸೂಚಿಸುತ್ತದೆ. ಮುಂದುವರೆದು, ಬೇಂದ್ರೆಯವರು ತಮ್ಮನ್ನು ತಾವು ‘ನಿನ್ನ ಉಪಾಸನೆ ಮಾಡುವ ಸಾರಸ್ವತ ಸುತನು’ ಎಂದು ಕರೆದುಕೊಂಡಿದ್ದಾರೆ. ಸಾರಸ್ವತನು ಕೆಲವೊಮ್ಮೆ ಸರಸ್ವತಿಯ ಪತಿಯಾಗಿಯೂ ಕೆಲವೊಮ್ಮೆ ಸುತನಾಗಿಯೂ ವೇದಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಕವಿಗಳು ಸರಸ್ವತೀಸುತರು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ, ಸಾರಸ್ವತನು ಸರಸ್ವತಿಗೆ ಪತಿ ಎಂದಾಗುತ್ತದೆ. ಇಲ್ಲದಿದ್ದರೆ, ‘ಕವಿ ಬೇಂದ್ರೆ’ ಸರಸ್ವತಿಯ ಮೊಮ್ಮಗನಾಗಬೇಕಾಗುತ್ತದೆ!

‘ರಾಣಿವಾಸದ ವಾಣಿಗೆ’ ಕವಿತೆ ಒಂದು ರೀತಿಯಲ್ಲಿ ಸರಸ್ವತಿಯ ನಿಂದನಾ ಸ್ತುತಿ.

ಸರಸೋತಿ ಅಂತ ನಿನ್ನ

ಅರಸೊತ್ತಿಗೆ ಒಪ್ಪಿಕೊಂಡೆ

ಬರಸೋ ಹೊತ್ತಿಗೆ, ಬರಸು ಇನ್ನ

ಪುರುಸೊತ್ತಿಲ್ಲಾ.

ಎಂದು ವಾಣಿಯ ಕೃಪೆಗಾಗಿ ಪ್ರೀತಿಪೂರ್ವಕ ಒತ್ತಾಯ ಮಾಡುತ್ತಲೇ,

ಆ ಗಾನ ಈ ಗಾನ ಸಾಕು ಮಾಡು

ವೇದಾನ ಹಾಳತ ಮಾಡಿ, ಅದನ್ನ ಹಾಡು

ಎಂದು ಆಜ್ಞಾಪಿಸುತ್ತಾರೆ. ಆದರೆ ಅದಕ್ಕೆ

ಸಂಬಳ ಕೊಡಲಾರೆ

ಸಂಭಾಳಿಸಿಕೋ ನೀನು

ಎಂದು ಕೈಚೆಲ್ಲುತ್ತಾರೆ. ನಿಜವಾಗಿಯೂ ಇದು ಪ್ರತಿಭಾಶಾಲಿಯಾದ ಕವಿಯ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಮಹಾಕವಿಗಳದ್ದು ಯಾವಾಗಲೂ ಬೇಡುವ ಪ್ರತಿಭೆಯಾಗಿರದೆ, ಪಡೆಯುವ ಪ್ರತಿಭೆಯಾಗಿರುತ್ತದೆ. ಅಂತೆಯೇ ಬೇಂದ್ರೆಯವರದೂ ಸಹ.

ಸರಸ್ವತಿಯನ್ನು ಕಾವ್ಯದೇವತೆಯಾಗಿ ಚಿತ್ರಿಸಿರುವ ಕವಿತೆ ‘ಓ ಹಾಡೇ!’.

ಭೋಗಯೋಗದ ಪದವೆ ಜೈನವಾಙ್ಮಯ ಮಧುವೆ

ಯೋಗ ಭೋಗದ ಹದವೆ ವಚನಬ್ರಹ್ಮನ ವಧುವೆ

ಮುದ್ದುವಿಠಲಗೆ ಮಾರಿಕೊಂಡ ದಾಸಿ!

ಮುದ್ದಣ್ಣನ ಲಲ್ಲೆವಾತಿನ ಪ್ರೇಮರಾಶೀ

ಜೀವ ಜೀವಾಳದಲಿ ಬೆರೆತು ಕೂಡೇ

ಕನ್ನಡ ಸಾಹಿತ್ಯ ವಾಙ್ಮಯ ಬೆಳೆದು ಬಂದ ದಾರಿಯನ್ನು ಸರಸ್ವತಿಯ ಸ್ತುತಿಯಲ್ಲಿಯೇ ತೋರಿಸುವ ಶಬ್ದಗಾರುಡಿಗತನ ಬೇಂದ್ರೆಯವರದ್ದು. ಮುದ್ದುವಿಠಲಗೆ ಮಾರಿಕೊಂಡ ದಾಸಿ ಎಂಬುದು, ದಾಸಸಾಹಿತ್ಯದ ಬೃಹತ್ತು-ಮಹತ್ತುಗಳನ್ನು ಸೂಚಿಸಿದರೆ, ಮುದ್ದಣನ ಲಲ್ಲೆವಾತಿನ ಪ್ರೇಮರಾಶಿ ಎಂಬುದು, ಮುದ್ದಣನ ಕಾವ್ಯಗಳ ಸರಸ-ಪ್ರೇಮವನ್ನು ಮನಗಾಣಿಸುತ್ತದೆ. ಪದ್ಯದ ನಾಲ್ಕನೇ ಚರಣದ ‘ಮುಂಗೈಯ ಮೇಲೆ ಅಂಗಜನ ಅರಗಿಳಿಯಿರಿಸಿ’ ಎಂಬುದು ಶೃಂಗೇರಿ ಶಾರದೆಯನ್ನು ಚಿತ್ರಿಸಿದರೆ, ‘ಚಾರುತಮ ಸರಸ ಅರಸಂಚೆಯನು ಹೂಡಿ, ಬಂದು ನನ್ನಿದಿರಲ್ಲಿ ನಾಟ್ಯವಾಡೆ’ ಸಾಲು ಸರಸ್ವತಿಯ ವಾಹನ ಹಂಸವನ್ನು ಸೂಚಿಸುತ್ತದೆ; ಜತೆಗೆ ನಾಟ್ಯಸರಸ್ವತಿಯನ್ನೂ ಚಿತ್ರಿಸುತ್ತದೆ. ಕೊನೆಯ ಚರಣದ ‘ನನ್ನ ನಾಲಗೆ ನಿನ್ನ ಬರಿ ಸೂಲಗಿತಿ’ ಎಂಬುದು ‘ವಾಕ್’ ಜನನಸ್ಥಾನ ನಾಲಗೆ; ನಾಲಗೆ ಬರಿ ಸೂಲಗಿತ್ತಿ ಮಾತ್ರ, ತಾಯಿಯಾಗಲಾರದು. ಆ (ವಾಕ್)ತಾಯಿ ನೀನೇ ಎಂಬ ನವೀನ ಕಲ್ಪನೆಯನ್ನು ಕಟ್ಟಿಕೊಡುತ್ತದೆ.

‘ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು, ಭಾರತ ಹಮಾರ ಮುಂದಾಗಬೇಕು’ ಎನ್ನುವ ಆಶಯದ ‘ಕವಿಗಳ ಕಾಣಿಕಿ’ ಕವನದ ಪ್ರಥಮ ಸಾಲಿನಲ್ಲಿಯೇ ‘ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ’ ಎಂದು ಸರ್ವಭಾಷಾಮಯೀ ಸರಸ್ವತಿಗೆ ನಮಸ್ಕರಿಸುತ್ತಾರೆ. ‘ಸಪ್ತಕಲಾ’ ಕವಿತೆ ಸಂಗೀತ, ಶಿಲ್ಪ, ನೃತ್ಯ, ನಾಟಕ, ಜೀವನ, ವಾಸ್ತು ಮತ್ತು ಸಾಹಿತ್ಯ ಎಂಬ ಏಳು ಕಲೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಅದರಲ್ಲಿ ಏಳನೆಯದು ಸರ್ವಾತ್ಮಕವಾದ ಸಾಹಿತ್ಯ. ಅದರಲ್ಲಿ, ‘ಸಕಲಾs ಸಿದ್ಧಾs ಸರಸ್ವತಿ ವೀಣಾ ಪಾಣಿ ಪಶ್ಯಂತಿಯ ವಾಣಿ........’ ಹೀಗೆ ಸಾಹಿತ್ಯವನ್ನು ಸರಸ್ವತಿ ಎಂದೇ ಸ್ತುತಿಸಲಾಗಿದೆ. ಹಾಗೆ ನೋಡಿದರೆ ಬೇಂದ್ರೆಯವರು ಹೇಳಿರುವ ಸಪ್ತಕಲೆಗಳಲ್ಲಿ ಸಾಹಿತ್ಯದ ಜೊತೆಗೆ ಸಂಗೀತ, ಶಿಲ್ಪ, ನೃತ್ಯ, ನಾಟಕ ಇವೆಲ್ಲವೂ ಸರಸ್ವತಿಗೆ ಸಂಬಂಧಿಸಿದವುಗಳೇ ಆಗಿವೆ. ಮಂಗರಸನ ಮತ್ತು ಕವಿಕಾಮನ ‘ಸಂಸಾರವಾರಿಧಿಗೆ ದ್ರೋಣಿ’ ಮತ್ತು ಕವಿಕಾಮನ ‘ಸಂಸಾರ ಸಂಭಾವಿತಾತ್ಮೆ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸರಸ್ವತಿಯನ್ನು ಗ್ರಹಿಸಿದರೆ, ಜೀವನಕಲೆ ಕೂಡಾ ಸರಸ್ವತಿಗೆ ಸಂಬಂಧಿಸಿದ್ದಾಗಿದೆ. ಆದರೆ, ವಾಸ್ತು ಸಪ್ತಕಲೆಗಳಲ್ಲಿ ಸೇರಿದ್ದು ಹೇಗೆ ಎಂಬುದು ಅರ್ಥವಾಗುವುದಿಲ್ಲ. ಸರಸ್ವತಿಯು ‘ಸಕಲಕಲಾಧಾರಿಣಿ’ ಎಂದರೂ, ವಾಸ್ತುವಿಗೇಕೆ ಈ ಪ್ರಾಮುಖ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಬೇಂದ್ರೆಯವರಿಗಿದ್ದ ಸಂಖ್ಯಾಶಾಸ್ತ್ರದ ಒಲವು ವಾಸ್ತುವನ್ನು ಸಪ್ತಕಲೆಗಳಲ್ಲಿ ಸೇರಿಸಲು ಕಾರಣವಿದ್ದಿರಬೇಕು.

Friday, July 09, 2010

ಕಲಕೇತಯ್ಯ ಅಥವಾ ಕಲಕೇತ ಬೊಮ್ಮಯ್ಯ

ಕೈಯಲ್ಲಿ ಹಿಡಿದಿದ್ದ ಬೆತ್ತ ಗಾಳಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುತ್ತಾ ತಿರುಗುತ್ತಿತ್ತು. ಕಾಲಿನಲ್ಲಿದ್ದ ಕಿರುಗೆಜ್ಜೆಗಳು ಕಾಲಂದಿಗೆಯೊಂದಿಗೆ ಸೇರಿ ಘಲ್ ಘಲ್ ಶಬ್ದವನ್ನು ಕುಣಿತಕ್ಕೆ ಅನುಗುಣವಾಗಿ ಹೊರಹೊಮ್ಮಿಸುತ್ತಿದ್ದವು. ಮುಂದಲೆಯಲ್ಲಿ ಎತ್ತಿಕಟ್ಟಿದ ಮುಡಿ, ನೊಸಲಲ್ಲಿ ಧರಿಸಿದ ವಿಭೂತಿ, ಕಿವಿಗಳಲ್ಲಿ ಧರಿಸಿದ ಹಸಿರಿನೋಲೆ, ಕಾಲುಗಳಲ್ಲಿ ಗೆಜ್ಜೆ-ಅಂದಿಗೆ, ಎಡಗೈಯಲ್ಲಿ ಟಗರಿನ ಕೊಂಬು, ಬಲಗೈಯಲ್ಲಿ ಬೆತ್ತ ಮೈಮೇಲೆ ಕಾವಿಯ ಬಟ್ಟೆ ಧರಿಸಿದ ಕಲಕೇತಯ್ಯ ಮದ್ದಳೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಬೀದಿಬೀದಿಯ ಜನರೆಲ್ಲಾ ಭಲೇ...ಭಲೇ ಎಂದು ಕೂಗಿ ಆತನನ್ನು ಉರಿದುಂಬಿಸುತ್ತಿದ್ದರು. ಕಲಕೇತಯ್ಯ ಗತ್ತಿನ ನಡಿಗೆ ಹಾಕುತ್ತಾ ಬರುತ್ತಿದ್ದ ಹಾಗೆ ಯಾವಾವುದೋ ಕೆಲಸದ ಮೇಲೆ ಹೊರಟವರೆಲ್ಲಾ ಒಂದರಗಳಿಗೆ ನಿಂತು ಅವನ ಕುಣಿತವನ್ನು ನೋಡಿಯೇ ಮುನ್ನಡೆಯುತ್ತಿದ್ದರು. ಬೀದಿಯ ಕೊನೆಗೆ ಬಂದಾಗ ಕೇತಯ್ಯನ ಕುಣಿತಕ್ಕೆ ವಿರಾಮ. ನೋಡುತ್ತಿದ್ದ ಜನರೆಲ್ಲಾ ತಮಗೆ ತೋಚಿದಷ್ಟು ಹಣವನ್ನು ಕೇತಯ್ಯನ ಸಂಗಡಿಗ ಹಿಡಿದ ಜೋಳಿಗೆಯಲ್ಲಿ ಹಾಕುತ್ತಿದ್ದರು.

ತಮ್ಮ ಬಿಡಾರಕ್ಕೆ ಹಿಂದುರಿಗಿದ ನಂತರ ಕೇತಯ್ಯ ತನ್ನ ಅಂದಿನ ಗಂಜಿಯೂಟಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಎಣಿಸಿ ತೆಗೆದುಕೊಡು ಉಳಿದುದ್ದನ್ನು ಬಡವರಿಗೆ, ಅಂಗವಿಕಲರಿಗೆ ಹಂಚಿಬಿಡುವಂತೆ ತನ್ನ ಸಂಗಡಿಗರಿಗೆ ಹೇಳುತ್ತಾನೆ. ಸಂಗಡಿಗರೆಲ್ಲಾ ಕೆಲವೇ ಸಮಯದಲ್ಲಿ ಸಂಗ್ರಹಗೊಂಡ ಅಷ್ಟೂ ಹಣವನ್ನು ನಿರ್ಗತಿಕರಿಗೆ ಹಂಚಿಬರುತ್ತಾರೆ. ಬರುವಷ್ಟರಲ್ಲಿ ಸಿದ್ದಗೊಂಡಿದ್ದ ಗಂಜಿಯೂಟವನ್ನು ಉಂಡು ಎಲ್ಲರೂ ವಿಶ್ರಾಂತಿಯ ಮೊರೆ ಹೋಗುತ್ತಾರೆ.

ಸುಮಾರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದಲ್ಲಿದ್ದ ಕಿಳ್ಳೇಕ್ಯಾತ ಕುಲದ ಕಲಕೇತ ಬೊಮ್ಮಯ್ಯ ಎಂಬುವವನ ದಿನಚರಿಯಿದು. ತನ್ನ ಕುಲದ ವೃತ್ತಿಯಾದ ವೇಷದ ಕುಣಿತವನ್ನು ನಿಷ್ಠೆಯಿಂದ ನಡೆಸುತ್ತಾ, ಕುಣಿತ ನೋಡಿದವರಿಗೆ ಮನರಂಜನೆಯನ್ನು, ಅದರಿಂದ ಗಳಿಸಿದ ಹಣವನ್ನು ನಿರ್ಗತಿಕರಿಗೆ ಹಂಚುತ್ತಾ ನಿಸ್ಸಂಗ್ರಹ ಬುದ್ದಿಯಿಂದ ಬದುಕು ಸಾಗಿಸುತ್ತಿದ್ದ ಶಿವಭಕ್ತ ಹಾಗೂ ಬಸವಾನುಯಾಯಿ ಈತ.

ಕಿನ್ನರಯ್ಯ ಎಂಬ ಶರಣ ತಾನು ನಡೆಸುತ್ತಿದ್ದ ದಾಸೋಹದಿಂದ ಕಲ್ಯಾಣದಲ್ಲಿ ಅತ್ಯಂತ ಚಿರಪರಿಚಿತನಾಗಿರುತ್ತಾನೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಕೇತಯ್ಯನ ಹನ್ನೊಂದು ವಚನಗಳು ದೊರಕಿವೆ. ಆತನ ಅಂಕಿತ ‘ಮೇಖಲೇಶ್ವರಲಿಂಗ’. ‘ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು, ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವುದು’, ‘ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು, ಆರಡಗಿತ್ತು ತಗರಿನ ಹಣೆಯಲ್ಲಿ, ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ, ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ, ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು’ ಎನ್ನುವ ಮೊದಲಾದ ಬೆಡಗಿನ ವಚನಗಳು ‘ಪ್ರಥಮದಲ್ಲಿ ರುದ್ರತ್ವ, ಅದು ಘಟಿಸಿದಲ್ಲಿ ಈಶ್ವರತ್ತ, ಈ ಎರಡು ಕೂಡಿದಲ್ಲಿ ಸದಾಶಿವತತ್ವ’ ಎಂಬ ತ್ರಿವಿಧ ವಚನಗಳು ಗಮನಸೆಳೆಯುತ್ತವೆ. ಸ್ವತಃ ಬಸವಣ್ಣನೇ ತನ್ನೊಂದು ವಚನದಲ್ಲಿ ‘ಕಲಕೇತನಂತಪ್ಪ ತಂದೆ ನೋಡೆನೆಗೆ’ ಎಂದು ಕೇತಯ್ಯನನ್ನು ನೆನೆದಿದ್ದಾನೆ.