Friday, April 19, 2013

ರಾಮನವಮಿ ಸ್ಪೆಷಲ್ : ಋತುಚಿನ್ಮಯೀ ಲೀಲೆಗಾಂ ಕವಿಕ್ರತು ಕಣಾ! - ಕುವೆಂಪು


ರಘುಕುಲದ ಅರಸು ದಶರಥ. ಬಹುದೊಡ್ಡ ಚಕ್ರವರ್ತಿ. ಒಬ್ಬರಲ್ಲ ಇಬ್ಬರಲ್ಲ ಮೂವರು ಹೆಂಡಂದಿರು ಅವನಿಗೆ. ಆದರೆ ಮಕ್ಕಳ ಭಾಗ್ಯವಿಲ್ಲ; ಬಯಕೆಯಿದೆ! ಸಿರಿತನ, ಸಿರಿಮನೆ, ಸಿರಿವೆಂಡಿರ್ ಇದ್ದರೂ, ಅವರನ್ನು ಕಾಮದಿಂ ಪ್ರೇಮದಿಂ ಪಾಲಿಸುತ್ತಿದ್ದರೂ, ತಲೆಯಲ್ಲಿ ಬೆಳ್ಳಿಗೆರೆ ಮೂಡಿದ್ದರೂ ಮಕ್ಕಳಾಗಲಿಲ್ಲ. ಅಂತಹ ಒಂದು ದಿನ ದಶರಥ ಅರಮನೆಯಯ ಸಿರಿತೋಟದಲ್ಲಿ ತಿರುಗುತ್ತಿದ್ದಾಗ ‘ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್ ನಟ್ಟು, ಕಾಲ್ ನಟ್ಟು’ ನಿಂತುಬಿಡುತ್ತಾನೆ. ಆ ಒಂದು ಸಾಮಾನ್ಯ ದೃಶ್ಯ ಆತನಲ್ಲಿ ಯೋಚನಾ ತರಂಗಗಳನ್ನೇ ಎಬ್ಬಿಸಿಬಿಡುತ್ತದೆ.

“ಮಕ್ಕಳ ಪಡೆದ ಪಕ್ಕಿಯ ಸಿರಿತನಂ
ಚಕ್ರವರ್ತಿಗೆ ತನ್ನ ಬಡತನವನಾಡಿ ಮೂದಲಿಸಿತೆನೆ,
ಕರುಬಿ ಕುದಿದನ್ ಕೋಸಲೇಶ್ವರನಾ
ವಿಹಂಗಮ ಸುಖಕೆ ಕಾತರಿಸಿ.”
ಆ ದೃಶ್ಯ, ಅದನ್ನು ಕಂಡ ದಶರಥ, ಆಗ ಅವನ ಮನಸ್ಸಿನಲ್ಲಿ ಮೂಡಿದ ಭಾವನೆಗಳು ಎಲ್ಲವೂ ಮುಂದಾಗಬಹುದಾದ ಮಹತ್ಕಾರ್ಯವೊಂದಕ್ಕೆ ವಿಧಿ ರಚಿಸಿದ ವ್ಯೂಹವಷ್ಟೆ!
“ದೇವತೆಗಳಾಶಿತಮೊ?
ಋತದಿಚ್ಛೆಯೊ?
ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ?
ವಿಭೂತಿಯಂ ತಿರೆಗೆ ಕರೆವಾಸೆಯಂ ಕೆರಳಿಸಿದುದು
ಆ ದೊರೆಯ ಹೃದಯದಲಿ!
ಊರ್ಧ್ವಲೋಕದ ದೇವ ಶಕ್ತಿಗಳ್ ಸಂಚು ಹೂಡಿದರೆನಲ್,
ಚರಿಸಿದತ್ತವರಿಚ್ಛೆ ಮುದುಕನೆರ್ದೆಯಲಿ ಮಕ್ಕಳಾಸೆವೋಲ್.”
ತನಗೂ ಮಕ್ಕಳು ಬೇಕು ಎಂಬ ಬಯಕೆ ಮನದಲ್ಲಿ ಬಲಿತೊಡನೆ ದಶರಥ ಸುಮ್ಮನಿರದಾದ. ಗುರುಗಳನ್ನು ಹಿರಿಯರನ್ನು ಕರೆಸಿದ. ಸಭೆಯಲ್ಲಿ ಹೀಗೆ ಹೇಳಿದ:
“ಗುರುಗಳಿರ, ಕೇಳಿಂ:
ನನ್ನೆರ್ದೆಯ ಸಿರಿಯ ಹೊಂಗಳಸದಲಿ
ಬಿರುಕೊಡೆದು ಸೋರುತಿದೆ ಬರಿದೆ ಜೀವಾಮೃತಂ.
ಬಾಳ್ವೆಯ ಸೊಡರ್ ತಾನಾರ್ವ ಮುನ್ನಂ
ಇನ್ನೊಂದು ಬತ್ತಿಯ ಕುಡಿಗೆ ದೀಪಾಂಕುರಂಗೈದು ಪೊತ್ತಿಸದೆ ಪೋದಡೆ
ಆಂ ನೆಲದರಿಕೆ ನೇಸರ್ಬಳಿಗೆ ಕಳ್ತಲೆಯನಡಕಿ ಪೋದಂತುಟಲ್ತೆ?
ಕಣ್ ಹೃತ್ತಾಪದಿಂ ಸೀದು ಕುರುಡಾಯ್ತಲಾ:
ಮನದ ಮಾಮರಕೆ ಹಿಡಿದಿಹುದು ನನಗೆ ನಿರ್ವಿಣ್ಣತೆಯ ಬಂದಿಳಿಕೆ.
ರುಚಿಸದು ವಿಹಂಗಮಗಳಿಂಚರಂ;
ಸೊಗಯಿಸದು ಮಾಮರಂ.
ಶೋಬಿಸದು ಕೆಂದಳಿರ್:
ಪಸುಳೆಯ ವಿಲಾಸದಿಂ ಶಿಶುವಿಲಾಸವನೆನ್ನ ನೆನಹಿಗೆ ಇರದೆ ಹೊಯ್ದು
ಕದಡುವುದೆದೆಗೆ ಕಡಗೋಲ್ ಇಡುವವೋಲ್.
ಸೊಗಯಿಸದು ನನಗಿಂದುಚೆಲ್ವಾವುದುಂ.
ಪಗಲಿರುಳ್ ರವಿಶಶಿಗಳುದಯಾಸ್ತಮಿಂದ್ರಧನುಗಳ್ ನನಗೆ ನೀರಸಂ.
ಸರ್ವಸೌಂದರ್ಯಾಮೃತಂ ಮೃತದಂತಿಹುದು.
ಶವದ ಸಿಂಗಾರದಂದದೊಳೆನೆಗೆ,
ಮಕ್ಕಳಿಲ್ಲದ ದೊರೆಗೆ, ನೃಪಸಂಪದಂ.
ಕುರುಡನುಂ ಕನ್ನಡಿಗೊಡೆಯನಾದ ಮಾತ್ರದಿಂ ಕಾಣ್ಬನೇಂ?
ಬಾಳ್ಗೆ ಕಣ್ಣಂತಿರ್ಪ ಕಂದರಂ ಪಡೆವೊಂದು ದೇವವಟ್ಟೆಯನು ಉಸಿರಿಮೆನಗೆ,
ಓ ವಂದ್ಯರಿರ;
ತವಿಸಿಮೆನ್ನೆದೆಯಗ್ಗಿಯಂ, ಬರಿಸಿ ಸುಗ್ಗಿಯಂ”
ರಾಜನ ದೀರ್ಘಭಾಷಣ ಕೇಳಿದ ನಂತರ ಸಭೆ ವಸಿಷ್ಠನ ಮುಖಾಂತರ ಪುತ್ರಕಾಮೇಷ್ಠಿಯ ಪರಿಹಾರವನ್ನು ಸೂಚಿಸುತ್ತದೆ. ಅದಕ್ಕೆ ಸಿದ್ಧತೆಗಳು ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ‘ಕೃತಧೀ, ವಿಚಾರಮತಿ, ಗುರುವರಂ ಜಾಬಾಲಿ ಋಷಿವರೇಣ್ಯಂ’ ದಶರಥನಲ್ಲಿಗೆ ಬರುತ್ತಾನೆ. ಬಂದು ಹೀಗೆ ಹೇಳುತ್ತಾನೆ.
“ರಘುಕುಲ ವಾರ್ಧಿಮಚಂದ್ರಮನೆ,
ಕುಲಪುರೋಹಿತರೊರೆದ ಜನ್ನಮಂ ಕೈಕೊಂಡು
ಪಸುಳೆ ರನ್ನರ ಪಡೆವೆ ಅದು ದಿಟಂ.
ಕೇಳ್ ಆದಡೊಂ ನನ್ನೊಂದುಕಾಣ್ಕೆಯಂ.
ಪೂರ್ವಪದ್ಧತಿವಿಡಿದು ಮಾಳ್ಪ ದಿಗ್ವಿಜಯ
ಹಯಮೇಧ ಮೊದಲಾದುವಂ ತೊರೆದು,
ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು,
ದೇವರ್ಕಳಂ ಪೂಜಿಸಲ್
ಮೆಚ್ಚುವುದು ಜಗವನಾಳುವ ಋತಂ.
ನೆಲದಲ್ಲಿ, ಬಾನಲ್ಲಿ,
ಕಡಲು ಕಾಡುಗಳಲ್ಲಿ
ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ,
ಕೇಳ್, 
ವಿಶ್ವಮಂ ಸರ್ವತ್ರ ತುಂಬಿದ ಅಂತರ್ಯಾಮಿ ಚೇತನಂ
ತಾಂ ಪ್ರೇಮಾತ್ಮವಾಗಿರ್ಪುದು. ಅದರಿಂದೆ, 
ಹಿಂಸೆಯಿಂ ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.
ರಾಜೇಂದ್ರ, ಕೇಳ್, 
ಪ್ರೇಮ ಸಾಕ್ಷಾತ್ಕಾರಮಾಗಿರ್ಪ ಋಷ್ಯಶೃಂಗಾದಿ ಮುನಿಗಳನಿಲ್ಲಿಗೆ ಆಹ್ವಾನಗೆಯ್.
ಮಖಶಾಲೆಯಂ ರಚಿಸಿ, ಯಜ್ಞಕುಂಡಂಗೈದು,
ವಿಶ್ವಶಕ್ತಿಸ್ವರೂಪಿ ಅಗ್ನಿಯಂ ಭಜಿಸು ನೀಂ ಸಾತ್ವಿಕ ವಿಧಾನದಿಂ.
ಪ್ರಜೆಗಳಂ ಬಡವರಂ ಸತ್ಕರಿಸವರ್ಗೆ ಬಗೆ ತಣಿವವೋಲ್.
ತೃಪ್ತಿಯಿಂ ‘ದೊರೆಗೊಳ್ಳಿತಕ್ಕೆ!’ ಎಂದು ಆ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ 
ಕೃಪಣ ವಿಧಿಯಂ ಪಿಂಡಿ ತಂದೀವುದೈ ನಿನಗೆ ನೆಲದರಿಕೆಯೊಳ್ಮಕ್ಕಳಂ.
ಜನಮನದ ಶಕ್ತಿ ಮೇಣ್ ಅವರ ಅಭೀಪ್ಸೆಯೆ 
ಮಹಾತ್ಮರಂ ನಮ್ಮಿಳೆಗೆ ತಪ್ಪದೆ ಎಳೆತರ್ಪುದು ಕಣಾ!”
ಮಹಾತ್ಮನೊಬ್ಬ ಹುಟ್ಟುವುದು ಆ ನಾಡಿನ ಪುಣ್ಯ; ಭವನದ ಭಾಗ್ಯ. ಅದಕ್ಕಾಗಿ ಆ ನಾಡು, ಆ ನಾಡಿನ ಜನರ ಅಭೀಪ್ಸೆ ಕಾತರಿಸುತ್ತಿರುತ್ತದೆ. ಹಯಮೇಧದಂತಹ ಹಿಂಸೆಯನ್ನು ತ್ಯಜಿಸಿ, ಪ್ರೇಮದಿಂದ ಪೂಜಿಸಿದರೆ ಮಾತ್ರ ಪ್ರೇಮಮೂರ್ತಿಗಳು ಉದಯಿಸುತ್ತಾರೆ. ತಲಪುವ ಗುರಿಯಷ್ಟೇ ಹಿಡಿಯುವ ಮಾರ್ಗವೂ ಮುಖ್ಯವಾಗಿರಬೇಕು; ಪವಿತ್ರವಾಗಿರಬೇಕು ಎಂಬುದು ಸಾರ್ವಕಾಲಿಕ ಸತ್ಯ. ಹಿಂಸೆಯಿಂದ ಹುಟ್ಟಿದ ಮನುಷ್ಯನಾಗಲೀ ರಾಷ್ಟ್ರವಾಗಲೀ ಎಂದೂ ಶಾಂತವಾಗಿರುವುದಿಲ್ಲ. ಜಾಗತಿಕ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಇದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವಲ್ಲವೆ?
ಜಾಬಾಲಿಯ ಮಾತನ್ನು ಶಿರಸಾವಹಿಸಿದ ದಶರಥ ‘ಸರಯೂ ತರಂಗಿಣಿಯ ಪಚ್ಚೆಯ ಪಸುರ್ ದಡದ ಮೇಲೆ’ ಪುತ್ರಕಾಮೇಷ್ಠಿಗೆ ಮೊದಲಾಗುತ್ತಾನೆ.

“ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು, 
ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಲಿ 
ಕಾಣ್ಬೊಂದು ತಾರಾಗರ್ಭದಂತೆ”
ಅಗ್ನಿಕುಂಡದ ಉರಿ ದೇದೀಪ್ಯಮಾನವಾಗುತ್ತದೆ.
“ಮಲೆನಾಡಿನಲ್ಲಿ ಮೊದಲ ಮುಂಗಾರು ಮಳೆಗರೆಯೆ, 
ಮರುದಿನಂ, ತೊಯ್ದ ಕಂಪಿನ ನೆಲದಿನುಕ್ಕೆದ್ದು, 
ಸಾಲ್ಗೊಂಡು ಲಕ್ಕಲಕ್ಕಂ ಪರಿದು, 
ಜೇನಿರ್ಪ ಪುತ್ತುಮಂ ಮುತ್ತುವಾ ಕಟ್ಟಿರುಂಪೆಯ ರಾಸಿ ಹಿಂಡುಗೊಳ್ವಂತೆ” 
ಜನ ಸೇರುತ್ತಾರೆ. ಒಟ್ಟಾರೆ ಸಾಕೇತ ಜನರ ಕಡಲಾಗುತ್ತದೆ. ತೃಪ್ತಿಯೇ ತಣಿದು ತೇಗುತ್ತದೆ! ರಾಜನು ಮಾಡಿದ ದಾನ ದಕ್ಷಿಣೆಗಳಿಂದ ಬಡತನದ ಬೆನ್ನು ಬಾಗುತ್ತದೆ! ‘ದೊರೆಯಿಚ್ಚೆ ನೆರವೇರಿ ಸೊಗವಾಗಲೆಂಬಾ ಹರಕೆ ಜನದ ಹೃದಯದಿಂದ’ ಮೂಡಿ ಹೋಮಧೂಮದ ಜೊತೆ ಬೆರೆತು ವ್ಯೋಮಾಂತರಕ್ಕೆ ಸೇರುತ್ತದೆ.
“ಸಗ್ಗವೆ ಮಣಿದು ತಣಿಸದಿರುವುದೆ ತಿರೆಯನ್ 
ಅತಿ ತೀವ್ರದ ಆಕಾಂಕ್ಷೆ ತಾಂ ಪಿಡಿದು ಜರ್ಗ್ಗಿಸಿ ಸೆಳೆಯೆ?
ಬಹುಜನರ ಪೆರ್ಬಯಕೆ ಕಲ್ಪವೃಕ್ಷ ಕೊಂಬೆಯನೆ ಕಚ್ಚಿ
ಸೆಳೆದು ಇಳೆಗೆ ಫಲದಮೃತಮಂ ಮಳೆಗರೆಯದಿಹುದೆ?
ಜನಮನಮೆ ಯುಗಶಕ್ತಿಯಲ್ತೆ?
ತಾನಾ ಶಕ್ತಿ ಮೂರ್ತಿಗೊಳೆ 
ನಾಂ ಅದನ್ನು ಅವತಾರಮೆಂದು ಪೂಜಿಪೆವಲ್ತೆ ಪೇಳ್,
ವ್ಯಷ್ಟಿರೂಪದಿನಿಳಿವ ಸೃಷ್ಟಿಯ ಸಮಷ್ಟಿಯಂ?”
ವ್ರತವನ್ನು ಕೈಗೊಂಡು ಪುತ್ರಕಾಮೇಷ್ಠಿಯನ್ನು ದಶರಥ ನೆರವೇರಿಸುತ್ತಾನೆ. ಆತ ಮನಸ್ಸಿನಲ್ಲಿ ಅಲ್ಪತೆಯ ಭಾವನೆಗಳನ್ನು ದೂರ ಮಾಡಿ, ‘ಮನದೊಲೆ ತನುಜರ್’ ಎಂದು ಭಾವಿಸಿ, ‘ಗಗನಮಂ ಪೃಥ್ವಿಯಂ ವಾರ್ಧಿಯಂ ಪರ್ವತಾರಣ್ಯ ವಿಸ್ತಾರ ಧೀರೋದಾತ್ತ ಗಾಂಭಿರ್ಯಮಂ, ಭದ್ರ ವೀರ ಸೌಂದರ್ಯಮಂ, ಧ್ಯಾನಿಸುತೆ ಭಾವಿಸುತೆ ರೂಪಿಸುತೆ ಕಾಮಿಸಿದನಾ ಭೂಮಿಪಂ ತದ್ರೂಪ ಗುಣ ಹೃದಯರಂ.’
“ನೃಪತಿಯಾ ಭಾವಮಹಿಮಾ ಜ್ಯೋತಿ ಸಂಚರಿಸಿದುದು ಮಿಂಚಿ
ಪಟ್ಟಮಹಿಷಿಯರೆರ್ದೆಗಳೊಳ್.
ಕೂರ್ಮೆ ಬೆಸುಗೆಯಿಂ 
ದ್ವೈತ ತಾನದ್ವೈತಮಪ್ಪುದೊಂದಚ್ಚರಿಯೆ ಪೇಳ್?
ಮೆಯ್ಗಳ್ ಎನಿತಾದೊಡೇನ್ ಒಲಿದವರ್ಗೆ ಅದು ದಿಟಂ. 
ಮನಂ ಒಂದೆಯಲ್ತೆ?”
ಸಂತಾನಕಾಮಿಯಾದ ದಶರಥನ ಮನದಿಚ್ಛೆ ಈಡೇರುವ ಸಂದರ್ಭ ಬರುತ್ತದೆ. ‘ಹೋಮಕುಂಡದೆಡೆ ಪೂಜೆಯೊಳ್ ಪುತ್ರಾಭಿವಾಂಛೆಯ ಸಮಾಧಿಯೊಳ್’ ದಶರಥನಿದ್ದಾಗ ಕೆಂಡದ ಉರಿ ಕೆರಳುತ್ತದೆ. ಕೋಟಿ ಮಿಂಚುಗಳಷ್ಟು ಬೆಳಕು ಬೆಳಗುತ್ತದೆ. ‘ಕೆಂಡದುರಿ ಮೆಯ್ಯ ಮಿಂಚಿನ ದಿವ್ಯಕಾಂತಿಯಲಿ’ ಮೂರ್ತಿಯೊಂದು ಮೈದೋರುತ್ತದೆ. ‘ಮೂಡುಬಾನಿನ ಕರೆಯ ಕುಂಕುಮದ ತೀರ್ಥದೊಳ್ ಮಿಂದೇಳ್ವ ಫಾಲ್ಗುಣ ಪ್ರಭಾತ ರವಿಯಂತೆ’ ಆತನ ಮುಖ ಶೋಭಿಸುತ್ತಿರುತ್ತದೆ. ‘ನಕ್ಷತ್ರಮಯ ರಾತ್ರಿಯಂ ಧರಿಸಿ ಸೂರ್ಯನೆ ಶೋಭಿಪಂತೆ’ ‘ಹೋಮಧೂಮಮಂ ನೀಲದ ದುಕೂಲದವೊಲಾಂತು’ ಮೂರ್ತಿ ಯಾಜಕರ ಮುಂದೆ ಕಾಣಿಸಿಕೊಳ್ಳುತ್ತದೆ. ‘ಕೋದಂಡ ಚಂದ್ರನಲಿ ಪೊನ್ನಜನ್ನದ ಜಲಂ ಪೊಳೆವಂತೆ’ ಇದ್ದ ‘ಮಿಸುಪ ಮಿಸುನಿಯ ಪಾತ್ರೆಯಲಿ ಸುಪಾಯಸ ರಸಂ’ ಅನ್ನು ನೀಡಿ ಆ ಮಂಗಳಮೂರ್ತಿ ಹೀಗೆ ಘೊಷಿಸುತ್ತದೆ.
“ಸೃಷ್ಟಿಯ ಶಕ್ತಿ ದೂತನೆಂ,
ರಾಜೇಂದ್ರ,
ಋತುಚಿನ್ಮಯೀ ಲೇಲೆಗಾಂ ಕವಿಕ್ರತು ಕಣಾ.
ಕೊಳ್ಳಿದಂ, 
ಕಾಮಧೇನುವಿನಕೊಡಗೆಚ್ಚಲಂ ಪಾಲ್ಗರೆದು ಗೆಯ್ದ ಪಾಯಸಮಿದಂ.
ಮರುಭೂಮಿ ನಗುವ ನಂದನವಪ್ಪುದು ಇದನೀಂಟೆ.
ಮೆಚ್ಚಿತಯ್ ನಿನ್ನೀ ವ್ರತಕೆ ಋತಂ.
ಪಸುಗೆ ನೀಡಂಶಂಗಳಂ ಸತಿಯರ್ಗೆ.
ಗೆಲ್ವುದಾ ವಿಧಿಲೀಲೆಯುಂ.”
ಇದನ್ನು ಕೇಳಿದ ದಶರಥ ಆನಂದದಿಂದ ‘ಬಯಸುವೆನ್ ನಿನಗೆ, ಪೂಜ್ಯನೆ, ಸುಖಾಗಮನಮಂ ನಡೆವೆನಿದೊ ನಿನ್ನಾಜ್ಞೆಯಂ’ ಎಂದು ವಿನಯದಿಂದ ಭಕ್ತಿಯಿಂದ ಪಾಯಸದ ಪಾತ್ರೆಯನ್ನು ಸ್ವೀಕರಿಸಿ, ಆ ಮೂರ್ತಿಗೆ ಪ್ರದಕ್ಷಿಣೆ ಬರುತ್ತಿರುವಾಗ,
“ಕವಿಶೈಲದುನ್ನತಿಯ ಸಂಜೆಗಿರಿ ನೆತ್ತಿಯೊಳ್ ಕುಳಿತು ಕವಿ ನೋಡುತಿರೆ,
ದೂರದ ತರಂಗಿತ ದಿಗಂತದಲಿ 
ಚೈತ್ರರವಿ ಮುಗಿಲ ನೆತ್ತರ್ಗಂಪಿನಲಿ ಮುಳುಗುವೋಲಂತೆ!”
‘ಮರೆಯಾದುದಾ ದೇವ ತೇಜಃಪುಂಜ ಮಖಮೂರ್ತಿಯ ಅಗ್ನಿಮೆಯ್ ಜ್ವಾಲಾ ನಿಮಗ್ನಮೆನಲ್’. ದಶರಥ ತಕ್ಷಣ ತನ್ನ ಸತಿಯರಿಗೆ,
“ರಾಜ್ಞಿ,
ಕುಸುಮಸುಖಮೊದಗಿತೀ ಮಾಮರಕೆ.
ಮಧುಫಲಸ್ವಾದು ಸಂತೋಷಮಿದೊ.
ಕೊಳ್ಳಿದಂ,
ಕ್ರತುಮೂರ್ತಿ ದಯೆಗೆಯ್ದ ಪಾಯಸಪ್ರಣಾಮಂ.”
ಎಂದು ಹೇಳಿ ಆ ಪಾಯಸದ ಪಾತ್ರೆಯನ್ನು ಕೌಸಲ್ಯೆಯ ಕೈಗಿಯುತ್ತಾನೆ. ‘ನೀನುಮಾ ನಿನ್ನ ತಂಗೆಯರಿದಂ ಪಸುಗೆಗೊಳ್ಳಿಮ್’ ಎನ್ನುತ್ತಾನೆ. ಮುಂದೆ ದಶರಥನ ಸತಿಯರು ಗರ್ಭಿಣಿಯರಾಗುತ್ತಾರೆ. ರಾಜನೊಂದಿಗೆ ಇಡೀ ಅಯೋಧ್ಯೆಯೇ ಸಂಭ್ರಮಿಸುತ್ತದೆ. ‘ರಮಾಗಮನದ ವಾರ್ತೆಯಂ ಘೊಷಿಸಿತು ಜಗಕೆ!’ ಎಂಬಂತೆ ಪ್ರಕೃತಿಯೂ ಅವರ ಜೊತೆಗೆ ಸೇರುತ್ತದೆ.
“ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷದಾ ಕ್ಷೀರಸಾಗರದಿಂ
ಕಿಶೋರತತಿ ಬರುವಂತೆ,
ಪ್ರತಿಭಾ ತಟಿಲ್ಲತೆಯ ಸುಪ್ರಭಾ ಸ್ಫರ್ತಿಯಿಂ
ಕವಿಯ ಮನದಿಂ ಮಹಾ ಕಾವ್ಯಮುದ್ಭವಿಪಂತೆ,
ಮರುದಿನಂ ಚೈತ್ರನವಮಿಯ ಶುಭಮುಹೂರ್ತದೊಳ್
ಪಿರಿಯರಸಿ ಬೆಸಲೆಯಾದಳ್ ಪಸುಳೆಚೆಲ್ವಂ,
ಸ್ಥಿರಾ ಸುಖಂ ಪೆರ್ಚುವೋಲ್.
ಶ್ರೀರಾಮನ ಆನಂತರಂ ಮೂಡಿದನು ಭರತನಾ ಕೈಕೆವಸಿರಿಂದೆ.
ಮೇಣ್ ಲಕ್ಷ್ಮಣಂ ಶತ್ರುಘ್ನರೆಂಬವಳಿ ಮಕ್ಕಳ್ಗಳಂ ಪೆತ್ತಳ್ ಸುಮಿತ್ರೆ,
ಮಗಧೇಶ್ವರ ತನೂಜೆ”

ಭರತ, ಲಕ್ಷ್ಮಣ ಮತ್ತು ಶತ್ರುಘ್ನರ ಜೊತೆಯಲ್ಲಿ ರಾಮನ ಅವತಾರವಾಗುತ್ತದೆ. ಜಾಬಾಲಿಯ ಕಾಣ್ಕೆಯಂತೆ, ಪ್ರೇಮದಿಂದ ಪ್ರೇಮವೇ ಉದ್ಭವಿಸುವಂತೆ ಪ್ರೇಮಮೂರ್ತಿಗಳಾದ ಮಕ್ಕಳನ್ನೇ ದಶರಥ ಪಡೆಯುತ್ತಾನೆ.
ಚಿತ್ರಕೃಪೆ: ಅಂತರ್ಜಾಲ (ಅನಾಮಿಕ ಕಲಾವಿದರೆಲ್ಲರಿಗೂ ಅನಂತಾನಂತ ವಂದನೆಗಳು)