Monday, March 17, 2014

ಜನಪದ ರಾಮಾಯಣದ ಕೆಲವು ಕಥೆಗಳು

ಹಳ್ಳಿಯ ಕಡೆ, ಜನರು ತುಂಬಾ ಸುಸ್ತಾಗಿ ನಿಟ್ಟುಸಿರು ಬಿಡುವಾಗ, ತಮ್ಮ ಕೈಮೀರಿ ಹೋದ ಸಂಕಟದ ಸಂದರ್ಭಗಳನ್ನು ನೆನೆಪಿಸಿಕೋಳ್ಳುವಾಗ, ಯಾವುದಾದರು ಒಂದು ಬಂಧನದಿಂದ ಕಳಚಿಕೊಳ್ಳುವಾಗ “ಓ ಲಕ್ಷ್ಮಣಾ” ಎಂದು ಉದ್ಘಾರ ತೆಗೆಯುತ್ತಾರೆ. ಈ ಉದ್ಘಾರ ಮೊದಲು ಬಂದಿದ್ದು ಮರೀಚನ ಬಾಯಿಯಿಂದ; ರಾಮನ ಧ್ವನಿಯ ರೂಪದಲ್ಲಿ! ಮಾರೀಚನ ಶರೀರ, ರಾಮನ ಶಾರೀರ ಇವೆರಡರ ಸಂಯೋಗದಿಂದ ಹುಟ್ಟಿದ ಈ ಉದ್ಘಾರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಿದೆ. “ಓ ಲಕ್ಷ್ಮಣಾ ಒಲೆಗೆ ಸೌದೆಯಿಲ್ಲ” ಎಂಬ ಉದ್ಘಾರವೂ ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿನ ಜನರ ಉದ್ಘಾರವಾಗಿ ಹೊರಹೊಮ್ಮುವುದನ್ನು ಕಾಣಬಹುದು.
ಕೇಳಬಾರದ್ದನ್ನು ಕೇಳಿದಾಗ, ಅನಪೇಕ್ಷಿತವಾದುದನ್ನು ಕಂಡಾಗ, ಕೇಳಿದಾಗ ಜನರು “ರಾಮ ರಾಮ” ಎಂದು ಎರಡೂ ಕೈಗಳಿಂದ ಕಿವಿ ಮುಚ್ಚಿಕೊಳ್ಳುತ್ತಾರೆ. ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತವೆ. ಈ “ರಾಮ ರಾಮ” ಎಂಬ ಉದ್ಘಾರವನ್ನು ಮೊದಲ ಭಾರಿಗೆ ಉದ್ಘರಿಸಿದವರು ಯಾರು? ಜನಪದ ರಾಮಾಯಣದಲ್ಲಿ ಈ ಪ್ರಶ್ನೆಗೆ ಒಂದು ಕಥಯೇ ಉತ್ತರರೂಪದಲ್ಲಿದೆ. ರಾಮ-ಲಕ್ಷ್ಮಣರು ಕಪಿಸೈನ್ಯದ ನೆರವಿನೊಂದಿಗೆ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಪ್ರವೇಶ ಪಡೆಯುತ್ತಾರೆ. ಅಂದು ಸಂಜೆ ರಾಮ ಏಕಾಂತದಲ್ಲಿದ್ದಾಗ ಒಂದು ವಿಚಾರ ಹೊಳೆಯುತ್ತದೆ. ರಾವಣನನ್ನು ಕೊಂದು ಸೀತೆಯನ್ನು ಕಾಪಾಡುವದಕ್ಕೋಸ್ಕರ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಬಂದಿದ್ದೇವೆ. ಸೀತೆಯೇನೊ ನಮ್ಮ ನಿರೀಕ್ಷೆಯಲ್ಲೇ ಇದ್ದಾಳೆ ಎಂದು ಆಂಜನೇಯ ಹೇಳಿದ್ದಾನೆ. ಆಳು ಮಾಡಿದ್ದು ಹಾಳು! ಜೊತೆಗೆ ಕೋತಿ ಬೇರೆ!! ಅವನ ಮಾತನ್ನಷ್ಟೇ ನಂಬಿ, ನಾನು ಲಂಕೆಯ ಮೇಲೆ ಯುದ್ಧ ಸಾರಿದ್ದೇನೆ. ರಾವಣನನ್ನೇನೊ ಕೊಲ್ಲಬಹುದು. ಆದರೆ… ಒಂದು ಪಕ್ಷ ಸೀತೆಯೇನಾದರೂ ರಾವಣನಿಗೆ ಮನಸೋತಿದ್ದರೆ ನನ್ನ ಹೋರಾಟವೇ ನಿರರ್ಥಕವಾಗುತ್ತದೆಯಲ್ಲವೆ? ಆದ್ದರಿಂದ ಮೊದಲು ಸೀತೆಯ ಮನಸ್ಸಿನಲ್ಲೇನಿದೆ ಎಂದು ತಿಳಿದುಕೊಳ್ಳಬೇಕು. ಎಂದು ಆಲೋಚಿಸಿದ ರಾಮ ಜೋಗಿಯ ವೇಷ ಧರಿಸಿ, ಸೀತೆಯನ್ನಿಟ್ಟಿದ್ದ ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಆತನ ಕಿಂದರಿಯ ನಾದಕ್ಕೆ, ಸೀತೆಯ ಕಾವಲಿಗಿದ್ದವರೆಲ್ಲಾ ಮಾಯದ ನಿದ್ದೆಗೆ ಹೋಗುತ್ತಾರೆ.
ಕಿಂದರಿಯ ನಾದದೊಂದಿಗೆ ರಾಮನಾಮವನ್ನು ಸೇರಿಸಿ ಹಾಡುತ್ತಿದ್ದುದರಿಂದ ಸೀತೆಗೆ ಸಂತೋಷವಾಗುತ್ತದೆ. ಜೋಗಿರಾಮನು, ರಾಮನನ್ನು ಹೊಗಳಿ ಹೊಗಳಿ ಹಾಡುತ್ತಾನೆ. ಸೀತೆ ಸಂತೋಷದಿಂದ ಕೇಳುತ್ತಾಳೆ. ಕೊನೆಯಲ್ಲಿ ಜೋಗಿರಾಮ, “ನೋಡಮ್ಮ. ರಾಮ ಎಷ್ಟೇ ಒಳ್ಳೆಯವನಿರಬಹುದು. ಆದರೆ ಕಡಲನ್ನು ದಾಟಿ ಬಂದು, ರಾಕ್ಷಸರನ್ನೆಲ್ಲಾ ಕೊಂದು, ನಿನ್ನನ್ನು ಬಿಡಿಸಿಕೊಂಡು ಹೋಗುತ್ತಾನೆ ಎನ್ನುವುದು ದೂರದ ಮಾತು. ಬಿಡಿಸಿಕೊಂಡು ಹೋದರೂ ಇಷ್ಟು ದಿನ ದೂರವಿದ್ದ ನಿನ್ನ ಮೇಲೆ ಆತನಿಗೆ ಪ್ರೀತಿ ಉಳಿದಿರುತ್ತದೊ? ಇಲ್ಲವೊ? ಆದ್ದರಿಂದ ಸುಮ್ಮನೆ ನೀನು ಅವನನ್ನು ಮರೆತು ನನ್ನನ್ನೇ ಏಕೆ ಮದುವೆಯಾಗಬಾರದು?” ಎನ್ನುತ್ತಾನೆ. ತಕ್ಷಣ ಸೀತೆ ತನ್ನೆರಡು ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು, “ರಾಮ ರಾಮ” ಎಂದು ಉದ್ಘರಿಸುತ್ತಾಳೆ. ಜೋಗಿಯನ್ನು ನೋಡಲಾರದೆ ಮುಚ್ಚಿಕೊಂಡಿದ್ದ ಕಣ್ಣುಗಳು ತೆರೆಯುವಷ್ಟರಲ್ಲಿ ಜೋಗಿರಾಮ ಅಲ್ಲಿಂದ ಮರೆಯಾಗಿಬಿಟ್ಟಿರುತ್ತಾನೆ. ಮಾರುವೇಷದಲ್ಲಿದ್ದ ರಾಮನ ಎದುರಿಗೇ ಸ್ವತಃ ಸೀತೆಯ ಬಾಯಿಂದ ಹೊರ ಬಿದ್ದ ಈ ಉದ್ಘಾರ ಇಂದಿಗೂ ಜನಸಾಮಾನ್ಯರು ಕೇಳಬಾರದ್ದನ್ನು ಕೇಳಿದಾಗ ಬಳಸುತ್ತಾರೆ ಎಂಬುದು ಜನಪದರ ನಂಬಿಕೆ.
‘ಇಂದ್ರಜಿತುವು ಶತ್ರು ಸಂಹಾರಾರ್ಥ, ಶಕ್ತಿಯ ಸಿಧ್ಧಿಗಾಗಿ ನಡೆಸುತ್ತಿದ್ದ ನಿಕುಂಬಿಲಾ ಯಾಗವನ್ನು ಪೂರೈಸದಂತೆ ತಡೆದರೆ ಮಾತ್ರ ನಮಗೆ ಗೆಲುವು ಇಲ್ಲದಿದ್ದರೆ ಇಲ್ಲ’ ಎಂಬ ವಿಭೀಷಣನ ಸಲಹೆಯನ್ನು ಸ್ವೀಕರಿಸಿ ಲಕ್ಷ್ಮಣ, ಆಂಜನೇಯ-ಅಂಗದರ ಸಹಾಯದಿಂದ ಆ ಯಾಗಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆ ಯಾಗವನ್ನು ಅರ್ಧಕ್ಕೆ ತಡೆದುದರಿಂದಲೇ ಇಂದ್ರಜಿತುವನ್ನು ಲಕ್ಷ್ಮಣ ಕೊಲ್ಲುವಲ್ಲಿ ಯಶಸ್ವಿಯೂ ಆಗುತ್ತಾನೆ. ಇದು ಶಿಷ್ಟರಾಮಾಯಣಗಳ ಕಥೆ. ಆದರೆ ಜನಪದ ರಾಮಾಯಣದ ಕಥೆ ಇದೇ ಘಟನೆಯನ್ನು ಬೇರೊಂದು ರೂಪದಲ್ಲಿ ಅಭಿವ್ಯಕ್ತಿಗೊಳಿಸಿವೆ.
ಇಂದ್ರಜಿತುವಿನೊಂದಿಗಿನ ಯುದ್ಧದಲ್ಲಿ ರಾಮನ ಸೈನ್ಯಕ್ಕೆ ಹಿನ್ನೆಡೆಯಾಗಿರುತ್ತದೆ. ಆಗ, ಇಂದ್ರಜಿತುವನ್ನು ಕೊಲ್ಲುವ ಬಗ್ಗೆ ಮಂತ್ರಾಲೋಚನೆ ನೆಡೆಯುತ್ತಿರುತ್ತದೆ. ವಿಭೀಷಣ, “ಯಾರು ಹದಿನಾಲ್ಕು ವರ್ಷಗಳ ಕಾಲ ನಿರಂತರವಾಗಿ ಉಪವಾಸ ಮಾಡಿರುತ್ತಾರೊ, ಬ್ರಹ್ಮಚರ್ಯ ಪಾಲಿಸಿರುತ್ತಾರೊ ಅಂಥವರು ಮಾತ್ರ ಇಂದ್ರಜಿತುವನ್ನು ಸುಲಭವಾಗಿ ನಿಗ್ರಹಿಸಬಹುದು” ಎಂದು ಸೂಚನೆ ಕೊಡುತ್ತಾನೆ. ಆಗ ಎಲ್ಲರಿಗೂ ಯೋಚನೆಯಾಗುತ್ತದೆ, ಹದಿನಾಲ್ಕು ವರ್ಷ ಉಪವಾಸ ಮಾಡಿರುವ ವ್ಯಕ್ತಿ ಸಿಗುವುದು ದುರ್ಲಭ ಎನ್ನಿಸುತ್ತದೆ. ತಕ್ಷಣ ಮೇಲೆದ್ದ ಲಕ್ಷ್ಮಣ “ನಾನು ಇಂದ್ರಜಿತುವನ್ನು ಕೊಲ್ಲಬಲ್ಲೆ” ಎನ್ನುತ್ತಾನೆ. ರಾಮನಿಗೆ ಆಶ್ಚರ್ಯ! “ಲಕ್ಷ್ಮಣ ನೀನು ಹದಿನಾಲ್ಕು ವರ್ಷ ಬ್ರಹ್ಮಚರ್ಯವನ್ನು ಪಾಲಿಸಿದ್ದೀಯ. ಆದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಉಪವಾಸವನ್ನೂ ಮಾಡಿದ್ದೀಯಾ?” ಎಂದು ಪ್ರಶ್ನಿಸುತ್ತಾನೆ. ಲಕ್ಷ್ಮಣ “ಹೌದು” ಎನ್ನುತ್ತಾನೆ. ವನವಾಸದ ಉದ್ದಕ್ಕೂ, ಲಕ್ಷ್ಮಣ ತನ್ನೆದುರಿಗೆ ಕುಳಿತು ಊಟ ಮಾಡಿದ್ದು ರಾಮನ ನೆನಪಿಗೆ ಬರುವುದಿಲ್ಲ. ಆದರೂ ರಾಮನಿಗೆ ಸಂದೇಹ.
ಏನೋ ನೆನಪಿಸಿಕೊಂಡವನಂತೆ, “ಲಕ್ಷ್ಮಣ ಒಂದು ಗುಡ್ಡದ ಮೇಲೆ, ನಾವಿಬ್ಬರೂ ಹಸಿವು ನೀರಡಿಕೆಯಿಂದ ಬಳಲಿದ್ದಾಗ, ಸಿಕ್ಕ ಒಂದೇ ಒಂದು ಬೋರೆ ಹಣ್ಣನ್ನು ನಾನೇ ಎರಡು ಭಾಗ ಮಾಡಿ ನಿನಗೊಂದು ಭಾಗ ಕೊಟ್ಟಿದ್ದೆ. ಅದನ್ನು ನೀನು ತಿಂದೆಯಲ್ಲವೆ?” ಎನ್ನುತ್ತಾನೆ. ಆಗ ಲಕ್ಷ್ಮಣ, “ಅಣ್ಣ ನಾನು ವನವಾಸದ ಮೊದಲ ದಿನದಿಂದಲೇ ಉಪವಾಸದ ವ್ರತವನ್ನು ಕೈಗೊಂಡಿದ್ದೆ. ಅಂದು ನೀನು ಹಣ್ಣು ಕೊಟ್ಟಾಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ನೀರು ಹುಡುಕಿ ತರುತ್ತೇನೆ ಎಂದು ಎದ್ದು ಹೋದೆ. ನೀನು ನಿನ್ನ ಕೈಯಾರೆ ಕೊಟ್ಟ ಹಣ್ಣನ್ನು ಎಸೆಯಲು ಮನಸ್ಸು ಬರಲಿಲ್ಲ. ಆದರೆ ತಿಂದು ವ್ರತಭಂಗ ಮಾಡಿಕೊಳ್ಳಲೂ ಮನಸ್ಸಾಗಲಿಲ್ಲ. ತಿನ್ನದೆ, ಬೇರೆ ಯಾವ ರೂಪದಲ್ಲಾದರೂ ಸರಿ ಆ ಹಣ್ಣನ್ನು ನನ್ನ ದೇಹದ ಒಳಗೆ ಸೇರಿಸಿಬಿಟ್ಟರೆ ವ್ರತವೂ ಉಳಿಯುತ್ತದೆ; ನೀನು ಕೊಟ್ಟ ಹಣ್ಣನ್ನು ನಿರಾಕರಿಸಿದಂತೆಯೂ ಆಗುವುದಿಲ್ಲ ಎಂದುಕೊಂಡು, ನನ್ನ ಎಡದ ತೊಡೆಯ ಒಂದು ಭಾಗವನ್ನು ಬಾಣದಿಂದ ಸೀಳಿ, ಅದರೊಳಗೆ ಆ ಹಣ್ಣನ್ನು ಇಟ್ಟುಬಿಟ್ಟೆ. ಅದು ಈಗಲೂ ಹಾಗೆಯೇ ಇದೆ. ಈಗ ಅದನ್ನು ತೆಗೆದು ತೋರಿಸಲೆ” ಎಂದು ಬಾಣದಿಂದ ತೊಡೆಯನ್ನು ಸೀಳಲು ಮುಂದಾಗುತ್ತಾನೆ. ರಾಮ, ವಿಭೀಷಣ ಮೊದಲಾದವರು ಅದರ ಅಗತ್ಯವಿಲ್ಲ ಎನ್ನುತ್ತಾರೆ. ರಾಮನಿಗೆ ಎಲ್ಲವೂ ನೆನಪಾಗುತ್ತದೆ. ಅಂದು ತುಂಬಾ ಬಳಲಿದ್ದ ತನಗೆ, ನೀರು ಹುಡುಕಿ ತಂದು ಸೇವೆ ಮಾಡಿದ ತಮ್ಮನಿಗೆ ಏನಾದರೂ ಕೊಡಬೇಕೆನ್ನಿಸಿ, ತನ್ನಲ್ಲಿದ್ದ ಒಂದು ವಿಶೇಷ ಬಾಣವನ್ನು ವರವಾಗಿ ನೀಡಿದ್ದು ನೆನಪಾಗುತ್ತದೆ. ಎಲ್ಲರ ಹರಕೆಯೊಂದಿಗೆ, ಲಕ್ಷ್ಮಣ ಯುದ್ಧದಲ್ಲಿ ಇಂದ್ರಜಿತುವನ್ನು, ಅಂದು ರಾಮ ಕೊಟ್ಟ ಬಾಣದಿಂದಲೇ ಕೊಲ್ಲುತ್ತಾನೆ.
ಈ ಕಥೆಯನ್ನು ಎಂದೂ ಮರೆತು ಹೋಗದಂತೆ ನನ್ನಲ್ಲಿ ಉಳಿಸಿದ್ದು “ಬಾಣಾವರ” ಎಂಬು ಊರು ಮತ್ತು ಅದರ ಸ್ಥಳಪುರಾಣ! ಆ ಊರು ಇರುವ ಜಾಗದಲ್ಲೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ನೀಡಿದ್ದು. ಆದ್ದರಿಂದಲೇ ಆ ಊರಿಗೆ “ಬಾಣಾವರ” ಎಂಬ ಹೆಸರು ಎಂಬ ಇನ್ನೊಂದು ಜನಪದ ಐತಿಹ್ಯದ ಕಾರಣದಿಂದ ಈ ಕಥೆ ಇಂದಿಗೂ ನನ್ನ ಮನದಲ್ಲಿ ಅಚ್ಚ ಹಸುರಾಗಿದೆ. ಜೊತೆಗೆ, ನಾನು ಬಾಣಾವರ ಮಾರ್ಗದಲ್ಲಿ ಪ್ರಯಾಣ ಮಾಡುವಾಗಲೆಲ್ಲಾ ಅಲ್ಲಿ ಕಾಣುವ ಒಂದು ಸಣ್ಣ ಗುಡ್ಡದ ಮೇಲೆಯೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ಕೊಟ್ಟಿರಬೇಕು ಎಂದು ಚಿತ್ರಿಸಿಕೊಳ್ಳುತ್ತೇನೆ!
ಉತ್ತರ ರಾಮಾಯಣದ ಕಥೆಯು ಮೂಲ ವಾಲ್ಮೀಕಿ ಕೃತವಲ್ಲ ಎಂಬ ಮಾತೂ ಇದೆ. ಅದು ನಿಜವೂ ಇರಬಹುದು. ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆಯ ಬಗೆಗಿನ ಶ್ರದ್ಧೆ ತೀವ್ರವಾಗಿದ್ದ ಕಾಲದಲ್ಲಿ ಅದು ಸೇರ್ಪಡೆ ಗೊಂಡಿರಲೂಬಹುದು. ತಪಸ್ಸು ಮಾಡಿದನೆಂಬ ಕಾರಣದಿಂದ ರಾಮನಿಂದಲೇ ಕೊಲೆಯಾಗುವ ಶೂದ್ರ ಶಂಭೂಕ, ಸೀತೆ ಮತ್ತೆ ಕಾಡುಪಾಲಾಗುವುದಕ್ಕೆ ಕಾರಣನಾದ ಅಗಸನ ಕಥೆ ಇವೆಲ್ಲವೂ ಅದಕ್ಕೆ ಸಾಕ್ಷಿಯಾಗಿವೆ. ಶಿಷ್ಟ ಪರಂಪರೆಯಲ್ಲಿ ಅಗಸನ ಮಾತಿನಿಂದ ನೊಂದ ರಾಮ, ಸೀತೆಯನ್ನು ಮತ್ತೆ ಕಾಡಿಗೆ ಅಟ್ಟುತ್ತಾನೆ. ಆದರೆ ಜನಪದ ರಾಮಾಯಣದ ಕಥೆಗಳು ಬೇರೆಯದನ್ನೇ ಹೇಳುತ್ತವೆ.

ಅಯೋಧ್ಯೆಗೆ ಹಿಂತಿರುಗಿ ಬಂದು ರಾಮ ಪಟ್ಟಾಭಿಷಕ್ತನಾಗಿರುತ್ತಾನೆ. ಸೀತೆ ತನ್ನ ತಂಗಿಯರೊಂದಿಗೆ, ಅತ್ತೆಯರೊಂದಿಗೆ, ಸಖಿಯರೊಂದಿಗೆ ಸುಖವಾಗಿ ಕಾಲ ಕಳೆಯುತ್ತಿರುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ಸೀತೆಯಿಂದ ವನವಾಸದ, ಲಂಕೆಯ ವಿಷಯಗಳನ್ನು ಕಥೆಯ ರೂಪದಲ್ಲಿ ಕೇಳುತ್ತಿರುತ್ತಾರೆ. ಸೀತೆ ಲಂಕೆ ಮತ್ತು ರಾವಣನ ಬಗ್ಗೆ ಎಷ್ಟು ವರ್ಣಿಸಿದರೂ ಅವರಿಗೆ ಕುತೂಹಲ. ಹತ್ತು ತಲೆ, ಇಪ್ಪತ್ತು ಕೈಗಳಿರುವ ರಾವಣನ ಬಗ್ಗೆ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಒಂದು ದಿನ ಸೀತೆ, ಅವರಿಗೆ ಹೇಳುತ್ತಲೇ, ಅವರ ಕುತೂಹಲ ತಣಿಸಲೊ ಎಂಬಂತೆ ರಾವಣನ ಒಂದು ಚಿತ್ರವನ್ನು ಬಿಡಿಸುತ್ತಾಳೆ. ದಶಕಂಠನ ಚಿತ್ರವನ್ನು ಸಖಿಯರೆಲ್ಲರೂ ನೋಡುತ್ತಿರುವಾಗಲೇ ರಾಮ ಬಂದುಬಿಡುತ್ತಾನೆ. ಗಡಿಬಿಡಿಯಲ್ಲಿ ಅವರೆಲ್ಲಾ ಎದ್ದು ಹೋಗುವಾಗ, ಒಬ್ಬ ಸಖಿ ಆ ಚಿತ್ರವನ್ನು ಸೀತೆ ಕುಳಿತಿದ್ದ ಪಲ್ಲಂಗದ ಕೆಳಗೆ ತಳ್ಳಿಬಿಡುತ್ತಾಳೆ. ಯಾವುದೋ ಸಂದರ್ಭದಲ್ಲಿ ಅದು ರಾಮನ ಕಣ್ಣಿಗೆ ಬೀಳುತ್ತದೆ. ರಾಮನಿಗೆ ‘ಸೀತೆ ಇನ್ನೂ ಆ ದಶಕಂಠನನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಾಳೆ. ಆದ್ದರಿಂದಲೇ ಆತನ ಚಿತ್ರವನ್ನು ಎರಕ ಹೊಯ್ದಂತೆ ಬರೆದು ಪಲ್ಲಂಗದ ಕೆಳಗೆ ಇಟ್ಟುಕೊಂಡಿದ್ದಾಳೆ’ ಎನ್ನಿಸುತ್ತದೆ. ಅವಳ ಮನಸ್ಸಿನಲ್ಲಿರುವ ಆ ಕೆಟ್ಟ ನೆನಪು ಕಳೆದು, ಆಕೆ ಪರಿಶುದ್ಧವಾಗುವವರೆಗೂ ಮತ್ತೆ ಆಕೆಗೆ ವನವಾಸವನ್ನು ವಿಧಿಸುತ್ತಾನೆ. ಅಂತೂ ಸೀತೆ ಎರಡನೆಯ ಬಾರಿಗೆ ಕಾಡು ಪಾಲಾಗುತ್ತಾಳೆ! ಇಲ್ಲಿಯೂ ರಾಮನ ಪಾತ್ರದ ಔನ್ನತ್ಯ, ಅಗಸನ ಕತೆಯಲ್ಲಿ ಆದಂತೆ ಕಡಿಮೆಯೇ ಆಗುತ್ತದೆಯಾದರೂ, ಈ ಕತೆಯಲ್ಲಿ ಜಾತಿವ್ಯವಸ್ಥೆಯ ಸೋಂಕು ಇಲ್ಲ ಎಂಬುದನ್ನು ಗಮನಿಸಬಹುದು.
ಶಿಷ್ಟರಾಮಾಯಣ ಪರಂಪರೆಯಲ್ಲಿ, ವಶಿಷ್ಠ ಮೊದಲಾದವರು ನಿರ್ಧರಿಸಿದ ಒಂದು ನಿರ್ಧಿಷ್ಟ ದಿವಸ ರಾಮನಿಗೆ ಪಟ್ಟಾಭಿಷೇಕವಾಗುತ್ತದೆ. ಆದರೆ ಜನಪದ ಪರಂಪರೆಯಲ್ಲಿಯೂ ಪುರೋಹಿತರು (ವಶಿಷ್ಠ) ಪಟ್ಟಾಭಿಷೇಕದ ದನವನ್ನು ನಿಗಧಿ ಪಡಿಸುತ್ತಾರಾದರೂ ಅದು ಒಂದು ದಿನ ತಡವಾಗಿ ನೆರವೇರುತ್ತದೆ! ರಾಮಪಟ್ಟಾಭಿಷೇಕಕ್ಕೆ ಒಂದು ದಿನದ ತಡೆಯಾದುದಕ್ಕೆ ಯಾರಿಗೂ ಬೇಸರವಾಗದೆ ಒಂದು ಹರ್ಷದ ವಾತಾವರಣವನ್ನೆ ಆ ಕಂಟಕ ಸೃಷ್ಟಿಸುತ್ತದೆ ಎಂಬುದು ಜನಪದ ಕಥೆಯಲ್ಲಿನ ವೈಶಿಷ್ಟ್ಯ.
ಪಟ್ಟಾಭಿಷೇಕದ ಮುನ್ನಾದಿನ ರಾಮ ಕಪಿಸೈನ್ಯಕ್ಕೇ ಒಂದು ಭಾರೀ ಭೋಜನಕೂಟ ಏರ್ಪಡಿಸಿದ್ದ. ಸಮಸ್ತ ಕಪಿಸೈನ್ಯ ಭೋಜನಕ್ಕೆ ಆಗಮಿಸಿದ್ದು ಪಂಕ್ತಿ ಪಂಕ್ತಿಗಳಲ್ಲಿ ಕುಳಿತಿತ್ತು. ಅಗ್ರಭಾಗದಲ್ಲಿ ಜಾಂಬವ, ಆಂಜನೇಯ, ಸುಗ್ರೀವ, ಅಂಗದ ಮುಂತಾದವರು ಕುಳಿತಿದ್ದರು. ನಂತರ ಕಪಿಗಳ ಗಾಥ್ರ ಶಕ್ತಿಯನ್ನು ಅನುಸರಿಸಿ ಕಪಿಗಳು ಕುಳಿತಿದ್ದರು. ತೀರಾ ಕೊನೆಯಲ್ಲಿ ಒಂದು ತೀರಾ ಚಿಕ್ಕದಾದ ಕಪಿ ಕುಳಿತಿತ್ತು. ಆರಂಭದಲ್ಲೇ ಉಪ್ಪಿನಕಾಯಿಯನ್ನು ಬಡಿಸಲಾಯಿತು. ನಂತರ ಬೇರೆ ಭಕ್ಷ್ಯಗಳು ಬರಲಾರಂಭಿಸಿದವು. ಅಷ್ಟರಲ್ಲಿ ಕೊನೆಯಲ್ಲಿದ್ದ ಕಪಿ, ತನ್ನ ತಟ್ಟೆಯಲ್ಲಿದ್ದ ಉಪ್ಪಿನಕಾಯಿಯನ್ನು ಹಿಡಿದು ಹಿಂದೆ ಮುಂದೆ ತಿರುಗಿಸಿ, ನೋಡುತ್ತಿತ್ತು. ಹಾಗೆ ನೋಡುತ್ತಲೇ ಅದನ್ನು ಬಲವಾಗಿ ಅದನ್ನು ಹಿಚುಕಿಬಿಟ್ಟಿತು. ಉಪ್ಪಿನಕಾಯಿಯಲ್ಲಿದ್ದ ಬೀಜ ಒಂದಷ್ಟು ಎತ್ತರಕ್ಕೆ ಎಗರಿಬಿಟ್ಟಿತು. ಅದನ್ನು ಕಂಡ ಕಪಿ ‘ಎಲಾ, ನನ್ನ ಎದುರಿಗೇ ಎಗರುತ್ತೀಯಾ? ನೋಡು ನಾನು ನಿನಗಿಂತ ಎತ್ತರೆಕ್ಕೆ ಎಗರಬಲ್ಲೆ’ ಎಂದು ನೆಗೆದೇ ಬಿಟ್ಟಿತು. ಅದರ ಪಕ್ಕದಲ್ಲಿ ಕುಳಿತಿದ್ದ ಕಪಿ, ‘ನಿನಗಿಂತ ನಾನು ಎತ್ತರಕ್ಕೆ ಹಾರಬಲ್ಲೆ ನೋಡು’ ಎಂದು ನೆಗೆಯಿತು. ಹೀಗೆ ಎಲ್ಲಾ ಕೋತಿಗಳು ಒಂದಕ್ಕಿಂತ ಒಂದು ಎತ್ತರಕ್ಕೆ ನೆಗೆಯಲಾರಂಭಿಸಿದವು. ಈ ಚೇಷ್ಟೆ ಅಂಗದ ಸುಗ್ರೀವರನ್ನೂ ಬಿಡಲಿಲ್ಲ. ಕೊನೆಯಲ್ಲಿ ಕುಳಿತು ಇದೆಲ್ಲವನ್ನೂ ನೋಡುತ್ತಿದ್ದ ಆಂಜನೇಯ ‘ಎಲಾ, ಸಮುದ್ರನ್ನು ಹಾರಿ ಲಂಕೆಗೆ ಹೋಗಿ ಬಂದವನು ನಾನು. ನನ್ನ ಎದುರಿಗೇ ಹಾರುತ್ತೀರಲ್ಲಾ’ ಎಂದವನೇ ಜಾಂಬವ ತಡೆಯುತ್ತಿದ್ದರೂ ನೆಗೆದೇ ಬಿಟ್ಟ. ಹೇಗೆ ನೆಗೆದನೆಂದರೆ ಆತ ಎಷ್ಟು ಹೊತ್ತಾದರೂ ವಾಪಸ್ಸು ಬರಲೇ ಇಲ್ಲ. ಆಂಜನೇಯ ಬರದೆ ಭೋಜನ ಕೂಟವೇ ನಡೆಯಲಿಲ್ಲ. ಅವನು ಬರುವವರೆಗೂ ಪಟ್ಟಾಭಿಷೇಕವೂ ನಡೆಯುವಂತಿಲ್ಲ. ಎಲ್ಲರೂ ಆಂಜನೇಯನಿಗೆ ಕಾದು ಕುಳಿತಿದ್ದರು. ಒಂದು ದಿನ ಕಳೆದ ಮೇಲೆ ಆಂಜನೇಯ ಆಕಾಶದಿಂದ ಇಳಿದ. ತನ್ನ ಕೃತ್ಯದ ಬಗ್ಗೆ ತನಗೇ ನಾಚಿಕೆಯಾಗಿತ್ತು ಆತನಿಗೆ. ಎಲ್ಲರ ಕ್ಷಮೆ ಕೇಳಿದ. ಎಲ್ಲರು ನಕ್ಕು, ಮುಂದೆ ನಡೆಯಬೇಕಾಗಿದ್ದ ಪಟ್ಟಾಭಿಷೇಕಕ್ಕೆ ಸಿದ್ಧರಾಗುತ್ತಾರೆ. ಅಂತೂ ಆಂಜನೇಯನ ಕಾರಣದಿಂದ ಒಂದು ದಿನ ತಡವಾಗಿ ರಾಮನಿಗೆ ರಾಜ್ಯೇಭಿಷೇಕವಾಗುವ ಈ ಕಥೆ ಯಾರಲ್ಲೂ ಯಾರ ಬಗ್ಗೆಯೂ ಕಹಿ ಭಾವನೆಗಳನ್ನು ಉಳಿಸುವುದಿಲ್ಲ ಎಂಬುದು ಗಮನಾರ್ಹ. ಕಪಿಗಳಿಗೆ ಸಹಜವಾದ ಚಂಚಲಚಿತ್ತ ಮನಸ್ಥಿತಿಯನ್ನು ರಾಮಾಯಣದ ಮಹೋನ್ನತ ಪಾತ್ರಗಳನ್ನೇ ಬಳಸಿಕೊಂಡು ಜನಪದ ಪ್ರಜ್ಞೆ ಚಿತ್ರಿಸಿದೆ ಎನ್ನಬಹುದು. ಜೊತೆಗೆ ಆಂಜನೇಯನ ಮೇಲೆ ರಾಮ ಮತ್ತು ಆತನ ಪರಿವಾರದ ಜನರಿಗಿದ್ದ ಗೌರವವೂ ವ್ಯಕ್ತವಾಗುತ್ತದೆ.
ರಾಮಾಯಣ ಕೇವಲ ಒಂದು ಕಾವ್ಯವಲ್ಲ; ಬರೀ ರಾಮನ ಕಥೆಯಲ್ಲ. ಅದು ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಅವರ ಬದುಕಿನಲ್ಲಿಯೇ ಅಂತರ್ಗತವಾಗಿದೆ ಎಂಬುದಕ್ಕೆ ಸಾಕ್ಷಿಯಂತಿವೆ ಈ ಕಥೆಗಳು

1 comment:

Badarinath Palavalli said...

ಶಿಷ್ಟ ರಾಮಾಯಣದಲ್ಲಿ ಕವಿ ಬರೆದುಕೊಟ್ಟ ಕತನವು ಜನಪದರ ಬಾಯಿಯಲ್ಲಿ ಮತ್ತಷ್ಟು ಮಗದಷ್ಟು ರೋಚಕವಾಗಿ ವಿಕಸನಗೊಳ್ಳುತ್ತದೆ ಅಲ್ಲವೇ?