Monday, May 18, 2015

ಪೆಜತ್ತಾಯರ ಒಂದು ಅಪ್ರಕಟಿತ ಬರಹ - ಬನ್ನಿ! ಕನ್ನಡದ ಅಭಿಮನ್ಯುವನ್ನು ಹರಸಿ!

(ಬೆಂಗಳೂರಿನ ಕನ್ನಡಿಗರೇ! ತಾವು ಈ ಕೆಲಸವನ್ನು ತಾವು ಇದ್ದಲ್ಲಿಂದಲೇ ಮಾಡಬಹುದು!)
"ಬೆಂಗಳೂರು" ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಗರ. ಇಲ್ಲಿ ಹಲವಾರು ಭಾಷೆಗಳನ್ನು ಆಡುವ ಜನರು ನೆಲೆಸಿದ್ದಾರೆ. ಇತರೇ ದೊಡ್ಡ ನಗರಗಳಿಗೆ ಹೋಲಿಸಿದರೆ ಇಲ್ಲಿ ಸದಾ ಶಾಂತ ಪರಿಸ್ಥಿತಿ ನೆಲೆಸಿದೆ. ಇಲ್ಲಿನ ಉತ್ತಮ ಹವಾಮಾನ ನೆಲಸಿಗರನ್ನು ಆಕರ್ಷಿಸಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ನೆಲೆಸಲು ಪ್ರತೀ ದಿನ ಐವತ್ತಕ್ಕಿಂತಲೂ ಹೆಚ್ಚು ಇತರ ಭಾಷೆಗಳನ್ನು ಆಡುವ ಸಂಸಾರಗಳು ಬಂದು ನೆಲೆಸುತ್ತಾ ಇವೆ.
ಬೆಂಗಳೂರಿನ "ಸ್ಥಳೀಯ ಭಾಷೆ" ಕನ್ನಡವಾದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಭಾಷೆ ತಿಳಿದಿದ್ದರೆ, ಇಲ್ಲಿನ ಸ್ಥಳೀಯ ಜನರೊಡನೆ ಮತ್ತು ಇಲ್ಲಿ ನೆಲಸಿರುವ ಇತರ ಭಾಷೆಗಳನ್ನಾಡುವ ಜನರೊಡನೆ "ಕನ್ನಡ ಭಾಷೆಗೊತ್ತಿಲ್ಲದೇ ಇದ್ದರೂ ವ್ಯವಹರಿಸಲು ಸಾಧ್ಯ!" ಎಂದು ಅಂತರ ರಾಷ್ಟ್ರೀಯ ಟೂರಿಸ್ಟ್ ಗೈಡ್ ಪುಸ್ತಕಗಳು ಸಾರಿ ಹೇಳುತ್ತಾ ಇವೆ.
ಕಳೆದ ಕೆಲವು ಶತಮಾನಗಳಿಂದಲೇ ಹೊರಗಿನಿಂದ ಬಂದ ಜನರು ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಸುಖಮಯ ಜೀವನದ ಅವಕಾಶಗಳಿಂದ ಆಕರ್ಷಿತರಾಗಿ, ನಮ್ಮ ಬೆಂಗಳೂರಿನ ಶಹರದಲ್ಲಿ ಮತ್ತು ಶಹರದ ಹೊರವಲಯಗಳಲ್ಲಿ ಆಸ್ತಿಪಾಸ್ತಿ ಹಾಗೂ ಜಮೀನುಗಳನ್ನು ಕೊಂಡು ನೆಲೆಸ ತೊಡಗಿದರು.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ಶಹರ ಭಾರತದ "ಇನ್ಫರ್ಮೇಷನ್ ಟೆಕ್ನಾಲಜಿಯ ರಾಜಧಾನಿ" ಅನ್ನಿಸಿಕೊಂಡಿತು.
ಇಲ್ಲಿ ದೊರೆಯುವ ಅಗ್ಗದ ವಿದ್ಯುತ್, ಬೇಕಾದಷ್ಟು ನೀರು, ಅಗ್ಗದ ಜಮೀನು, ಅಗ್ಗದ ಕೂಲಿ ಕೆಲಸಗಾರರು, ವೈಪರೀತ್ಯಗಳಿಲ್ಲದ ಹವಾಮಾನ ಮತ್ತು ಸದಾ ಪರಕೀಯರನ್ನು ವಿಶ್ವಾಸದಿಂದ ಸ್ವಾಗತಿಸುವ ಶಾಂತ ಸ್ವಭಾವದ ಜನತೆ, ನಮ್ಮಲ್ಲಿಗೆ ಕಾಲಿಟ್ಟ ಎಲ್ಲಾ ಹೊಸಾ ನೆಲಸಿಗರನ್ನು ಸ್ವಾಗತಿಸಿದುವು.
ಮೇಲ್ಕಾಣಿಸಿದ ಅಪರೂಪದ ಅನುಕೂಲತೆಗಳು ಬೆಂಗಳೂರಿನಲ್ಲಿ ನೆಲೆಸಲು ಬಂದ "ಐ. ಟಿ." ಮತ್ತು "ಬಿ. ಟಿ." ದೊರೆಗಳಿಗೆ ಬಹು ಅನುಕೂಲವಾದ ವಾತಾವರಣವನ್ನೇ ಕಲ್ಪಿಸಿದುವು.
ನಾವು ನೋಡುತ್ತಿದ್ದಂತೆಯೇ ಈ ದೊಡ್ಡ ದೊಡ್ಡ ಸಂಸ್ಥೆಗಳು ಯಾವ ಸಮಸ್ಯೆಯೂ ಇಲ್ಲದೇ ಬೆಳೆದು ನಿಂತುವು.
ಬೆಂಗಳೂರಿನ ಮೂಲ ರೂಪವೇ ಈ ಸಂಸ್ಥೆಗಳ ಅಸ್ತಿತ್ವದಿಂದ ಬದಲಾಯಿತು. ವಾಹನ ಸಂದಣಿ ಮತ್ತು ಜನಸಂದಣಿ ಹೆಚ್ಚಿ ಇಲ್ಲಿ ವಾಸಿಸುವ ಜನರ ಜೀವನ ರೀತಿಯೇ ಬದಲಾಯಿತು. ಮನೆಗಳ ಮತ್ತು ಸೈಟುಗಳ ಬೆಲೆ ಗಗನಕ್ಕೆ ಏರಿದುವು.
ಅತ್ಯಾಧುನಿಕವಾದ ಅಂತರ ರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳು ಇಲ್ಲಿ ಈಗ ದೊರಕುತ್ತಾ ಇರುವುದರಿಂದ "ಜಾಗತಿಕ ಮಟ್ಟದ ನವ ಸಂಸ್ಕೃತಿ ಹಾಗೂ ನಡವಳಿಕೆಗಳು" ಇಂದಿನ ಆಧುನಿಕ ಬೆಂಗಳೂರಿನಲ್ಲಿ ಎದ್ದು ಕಾಣುತ್ತಾ ಇವೆ.
ಇದು ನಮಗೆ ಸಂತೋಷದ ವಿಚಾರವೇ!
ಈ ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಕನ್ನಡ ಆಡುವ ಜನರ ಪರಿಸ್ಥಿತಿಯು ಮಾತ್ರ ಈ ಅಭಿವೃದ್ಧಿಗಳಿಗೆ ಹೊಂದಿಕೊಂಡಂತೆ ಬೆಳೆಯಲೇ ಇಲ್ಲ!
ಸ್ಥಳೀಯರಾದ ಕನ್ನಡ ಮಾತನಾಡುವ ಜನರಲ್ಲಿ ಅಲ್ಲೋ ಇಲ್ಲೋ ಒಬ್ಬಿಬ್ಬರು ಮಾತ್ರ "ಐ.ಟಿ. ಅಥವಾ ಬಿ. ಟಿ." ಕೆಲಸಗಳನ್ನು ಮಾಡುತ್ತಾ ಇರುವುದನ್ನು ನಾವು ಇಂದು ಕಾಣಬಹುದು ಅಷ್ಟೇ!
ಕನ್ನಡಿಗರನ್ನು ನಿರುದ್ಯೋಗದ ಭೂತ ಇನ್ನೂ ಬಹು ಜೋರಾಗಿ ಕಾಡುತ್ತಾ ಇದೆ.
ನಮ್ಮ ಕರ್ನಾಟಕದ ಸರಕಾರ ಇದುವರೆಗೆ ಇಲ್ಲಿ ನೆಲಸಲು ಬಂದ ಉದ್ಯಮಿಗಳಿಗೆ ಕೆಂಪು ರತ್ನ ಕಂಬಳಿಯ ಸ್ವಾಗತವನ್ನು ನೀಡಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿತು.
ಆದರೆ, ಇದುವರೆಗೆ ಕರ್ನಾಟಕವನ್ನು ಆಳುತ್ತಾ ಇದ್ದ ನಮ್ಮ ಪರೋಪಕಾರೀ ಸರಕಾರಗಳು, "ಕನ್ನಡಿಗರಿಗೆ ಕಡ್ಡಾಯವಾಗಿ ಒಂದು ಪರಸ್ಪರ ಅನುಕೂಲವಾದ ದಾಮಾಶಯದ ಪ್ರಕಾರ, ನೌಕರಿ ಕೊಡಿರಿ! " ಎಂಬ ಶರತ್ತನ್ನು ಇದುವರೆಗೆ ಹಾಕಲೇ ಇಲ್ಲ.
ಅದಕ್ಕೆ ಸರಿಯಾಗಿ, ಈ "ಐ. ಟಿ. ಮತ್ತು ಬಿ. ಟಿ." ದೊರೆಗಳು, ಹೊರಗಿನಿಂದ ಬಂದವರಿಗೆ ದೊಡ್ಡ ಕೆಲಸಗಳನ್ನು ನೀಡಿ, ಸ್ಥಳೀಯರನ್ನು ಕಡೆಗಣಿಸಿದರು.
ಹೆಚ್ಚಾಗಿ ಸ್ಥಳೀಯರಿಗೆ ತಾತ್ಕಾಲಿಕ ಕೂಲಿ ಅಥವಾ ಕಟ್ಟಡಗಳ ನಿರ್ಮಾಣ ಕೆಲಸಗಳಂತಹಾ ದೇಹ ಶ್ರಮದ ಹಂಗಾಮಿ "ಕೂಲಿ" ಕೆಲಸಗಳನ್ನು ಮಾತ್ರ ನೀಡುವ ಧೋರಣೆಯನ್ನು ರೂಢಿಸಿಕೊಂಡು ಬಿಟ್ಟರು.
ಇದು ನಮ್ಮ ಬೆಂಗಳೂರಿನಲ್ಲಿ ನಡೆದ ಬಹು ದೊಡ್ಡ ವಿಪರ್ಯಾಸ.
ಇದಷ್ಟೇ ಅಲ್ಲದೆ, ನಮ್ಮ ಕೇಂದ್ರ ಸರಕಾರವು ಕೂಡಾ ಧಾರಾಳವಾಗಿ ಜಾಗತಿಕ "ಐ. ಟಿ. ಮತ್ತು ಬಿ. ಟಿ" ಒಪ್ಪಂದಗಳಿಗೆ ಸಹಿ ಹಾಕಿತು ಮತ್ತು "ಈ ಜಾಗತೀಕರಣ ಒಪ್ಪಂದಗಳೇ ಇನ್ನು ಮುಂದಕ್ಕೆ ನಮ್ಮ ಪ್ರಗತಿಯ ಬೆನ್ನೆಲುಬು ಆಗಲಿವೆ!" ಎಂಬ ಹೇಳಿಕೆಗಳನ್ನು ನೀಡಿ ನಮ್ಮ ಜನರನ್ನು ಸಂತೋಷ ಪಡಿಸಲು ಪ್ರಯತ್ನಿಸಿತು.
ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳು ನಮ್ಮ ನಾಡಿಗೆ ಬಂದು ಬಹು ಚೆನ್ನಾಗಿಯೇ ನೆಲೆಯೂರಿ ನಿಂತುವು.
ಭಾರತದ ನೆಲದಲ್ಲಿ ಭದ್ರವಾಗಿ ಬೀಡು ಬಿಟ್ಟ ಹಲವು "ಬಿ.ಟಿ." ಸಂಸ್ಥೆಗಳು, ಇಂದು ನಮ್ಮಲ್ಲಿ ಬೆಳೆಯುವ ಹಲವಾರು ಸಸ್ಯ ತಳಿಗಳು, ವೈದ್ಯಕೀಯ ಗಿಡ ಮೂಲಿಕೆಗಳು, ಹೆಚ್ಚೇಕೆ? ನಮ್ಮಲ್ಲಿ ನಾವು ತಲತಲಾಂತರವಾಗಿ ಬೆಳೆಯುತ್ತಾ ಬಂದಿರುವ ವಿಶಿಷ್ಟ ತರಹೆಯ ಅಕ್ಕಿ, ಬೇಳೆ, ಅರಸಿನ. ಕಹಿ ಬೇವು, ತುಳಸಿ ಮುಂತಾದ ಹಲವಾರು ಕೃಷಿ ಉತ್ಪನ್ನಗಳ ಮೇಲೆ ಇಂದು ತಮ್ಮ ಜಾಗತಿಕ ಪೇಟೆಂಟ್ ಹಕ್ಕುಗಳನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಾ ಇವೆ.
"ಬಿ. ಟಿ." ಕ್ಷೇತ್ರದಲ್ಲಿನ "ಭಾರತೀಯತೆಯೇ" ಮಾಯವಾಗುವ ಕಾಲ ಇದೀಗ ಸನ್ನಿಹಿತ ಆಗುತ್ತಾ ಇದೆ.
ಇಂದು ನಾವು "ನಮ್ಮನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಾ ನಮ್ಮಲ್ಲಿಗೆ ಬಂದು ನೆಲೆನಿಂತ ಬಹು ರಾಷ್ಟ್ರೀಯ ಸ್ವಾಮ್ಯದ ಸಂಸ್ಥೆಗಳನ್ನು ನಂಬಿ ಕೆಟ್ಟೆವೇ?" ಎಂಬ ಪ್ರಶ್ನೆ ಕನ್ನಡಿಗರನ್ನು ಇಂದು ಕಾಡುತ್ತಾ ಇದೆ.
ಈ ಮಧ್ಯೆ "ಐ. ಟಿ. ಮತ್ತು ಬಿ. ಟಿ." ಸಂಸ್ಥೆಗಳವರು ಪ್ರತೀವರ್ಷ "ಶತ ಕೋಟಿ ಕಟ್ಟಲೆ ಲಾಭ ತಂದು, ನಾವು ನಿಮ್ಮ ಕರ್ನಾಟಕವನ್ನು ಉದ್ಧರಿಸುತ್ತಾ ಇದ್ದೇವೆ!" ಎಂಬ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ.
ಎಲ್ಲಾ ಸರಿ! ಅವರುಗಳು ಇತ್ತೀಚೆಗೆ ಹೊಂದಿರುವ "ಸ್ವಂತ ಅಭಿವೃದ್ಧಿಗಳಿಂದ" ನಮ್ಮ ಬಡ ಕನ್ನಡಿಗರಿಗೆ ಎಷ್ಟು ಬಾಭ ಸಿಕ್ಕಿದೆ? - ಎಂಬುವುದೇ ಇಂದು ನಮ್ಮ ಇದುರಿಗೆ ಇರುವ ಯಕ್ಷ ಪ್ರಶ್ನೆ.
ಇಂದು "ಬೆಂಗಳೂರು" ಎಂಬ ಶಬ್ದವು ಒಂದು "ಜಾಗತಿಕ ಭಾಷಾ ಪದವೇ ಆಗಿಬಿಟ್ಟಿದೆ". ಇತ್ತೀಚೆಗೆ ಪ್ರಕಟ ಆಗುತ್ತಾ ಇರುವ ಭಾಷಾ ನಿಘಂಟುಗಳು "ಬೆಂಗಳೂರು" ಎಂಬ ಪದಕ್ಕೆ ಹೊಸ ಅರ್ಥ ನೀಡುತ್ತಾ ಇವೆ.
"ಐ. ಟಿ." ಕ್ಷೇತ್ರದಲ್ಲಿ ಈ "ಬೆಂಗಳೂರು" ಎಂಬ ಪದ ೯/೧೧ ನಂತರ ಸೇರಿದ "ಜಾಗತಿಕ ಪದ" ಆಗಿರುತ್ತದೆ.
ಇಂದು ಅಮೆರಿಕಾದ ಸಂಯುಕ್ತ ಸಂಸ್ಥಾನಗಳ "ಐ. ಟಿ." ಕ್ಷೇತ್ರದಲ್ಲಿ ಯಾರಾದರೂ ತಮ್ಮ ಕೆಲಸ ಕಳೆದುಕೊಂಡರೆ " ಆತನ ಕೆಲಸ ಬೆಂಗಳೂರಿಗೆ ಹೋಯಿತು! "His job is Bangalored!"ಎನ್ನುತ್ತಾರೆ.
ಹೌದು! ಅಮೆರಿಕದಲ್ಲಿ ಕಳೆದುಕೊಂಡ ಆ ಕೆಲಸಗಳು ಬೆಂಗಳೂರಿಗೆ ಖಂಡಿತವಾಗಿ ಬಂದಿರಲೂ ಬಹುದು!
ಆದರೆ, "ಅವು ಇಂದು ಬೆಂಗಳೂರಿನ ಎಷ್ಟು ಕನ್ನಡಿಗರಿಗೆ ಅಥವಾ ಕನ್ನಡದ ಕಲಿತ ಜನರಿಗೆ ದಕ್ಕಿವೆ..??" ಎಂಬುದೇ ಇಂದಿನ "ಮುಖ್ಯ ಪ್ರಶ್ನೆ".
ಇಂದಿನ ಭಾರತದಲ್ಲಿ ನಮ್ಮ ಬೃಹತ್ ಬೆಂಗಳೂರು "ಐ. ಟಿ. ಮತ್ತು ಬಿ. ಟಿ." ಕ್ಶೇತ್ರಗಳ ಕೇಂದ್ರ ಬಿಂದು.
ಬೆಂಗಳೂರು ಅಗಾಧವಾಗಿ ಬೆಳೆಯುತ್ತಾ, ಭಾರತದ ಎಲ್ಲಾ ಭಾಗಗಳಿಂದಲೂ ವಲಸಿಗರನ್ನು ಆಕರ್ಷಿಸುತ್ತಾ ಇದೆ.
ಬೆಂಗಳೂರು ಇಂದು ಉತ್ತರ ಭಾರತೀಯರು ಇಷ್ಟ ಪಟ್ಟು ನೆಲಸಲು ಬಯಸುವ "ಸೇಫ಼್ ಪ್ಲೇಸ್".
ಬೆಂಗಳೂರು ಬಹಳ ಹಿಂದಿನ ಕಾಲದಿಂದಲೂ, ನಮ್ಮ ದಕ್ಷೀಣ ಭಾರತದ ಇತರೇ ರಾಜ್ಯಗಳ ಜನರನ್ನು ಆಕರ್ಷಿಸುತ್ತಾ ಇದೆ. ಈ ವಲಸಿಗರ ಪಾಲಿಗೆ ನಮ್ಮ ಬೆಂಗಳೂರು "ಏರ್ ಕಂಡೀಶನ್ಡ್ ಸಿಟಿ".
ಮೇಲಿನ ಹೆಗ್ಗಳಿಕೆಗಳನ್ನೆಲ್ಲಾ ನಾವು ಕೂಡಾ ಒಪ್ಪಿಕೊಳ್ಳೋಣ. ದುರದೄಷ್ಟವೆಂದರೆ, ಇಲ್ಲಿಗೆ ಬಂದ ವಲಸಿಗರು ಕನ್ನಡ ಭಾಷೆಯನ್ನು ಕಲಿಯುವ ಅಗತ್ಯವನ್ನು ಕಾಣದೇ, ತಮ್ಮ ತಮ್ಮ ಭಾಷೆಗಳ ಜತೆಗೆ ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಬಳಸುತ್ತಾ ಆರಾಮವಾಗಿ ಇರುವುದನ್ನು ನಾವು ಇದುವರೆಗೆ ಕಾಣುತ್ತಾ ಇದ್ದೆವು.
ಇಂದು ನಮ್ಮ ಬೆಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುವ ಪ್ರಯತ್ನಗಳು ನಡೆಯುತ್ತಾ ಇವೆ, ಇದು ನಮಗೆ ಬಹಳ ಹೆಮ್ಮೆಯ ಸಂಗತಿ.
ಆದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಬಾರದ ಬಡ ಕನ್ನಡಿಗರು ಯಾವುದಾದರೂ "ಪ್ರತಿಷ್ಠಿತ" ಅಂತರ ರಾಷ್ಟ್ರೀಯ ಮಳಿಗೆಗಳಿಗೆ ಅಥವಾ ಐಷಾರಮದ ಹೋಟೆಲುಗಳಿಗೆ ಹೋದರೆ, ಅಲ್ಲಿ ಕೆಲಸ ಮಾಡುತ್ತಾ ಇರುವ ಕನ್ನಡದ ಜನರೇ. "ಕನ್ನಡ ಭಾಷೆ ಬರದವರಂತೆ ನಟಿಸಿ" ಯಾವುದೋ ಅನ್ಯ ಭಾಷೆಗಳಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ!
ಅಚ್ಚ ಕನ್ನಡಿಗರರಾದ ನಾವು ನಮ್ಮದೇ ಆದ ಬೆಂಗಳೂರಿನಲ್ಲಿ "ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ವ್ಯವಹಾರ" ಮಾಡಲು, ಈ ರೀತಿಯ "ಪರಭಾಷಾ ಪ್ರೇಮಿ" ಕನ್ನಡಿಗರೇ ಒಂದು ರೀತಿಯ "ಹಿಂಜರಿಕೆಯನ್ನು" ಉಂಟು ಮಾಡುತ್ತಾ ಇದ್ದಾರೆ.
ಇದು ಅತ್ಯಂತ ವಿಷಾದದ ಸಂಗತಿ. ಅಲ್ಲವೇ?
ನಮ್ಮ ಕರ್ನಾಟಕದ ರಾಜಧಾನಿಯಲ್ಲೇ ನಮ್ಮ ಮಾತೃ ಭಾಷೆಯಾದ ಕನ್ನಡವು "ಚಲಾವಣೆ ಆಗದಿದ್ದರೆ" ನಮ್ಮ ಅಸ್ತಿತ್ವಕ್ಕೇ ಅದೊಂದು ದೊಡ್ಡ ಸವಾಲು ಅಲ್ಲವೇ?
ನಮ್ಮ ಬೆಂಗಳೂರಿನಲ್ಲಿ "ನಲ್ವತ್ತು ವರುಷಗಳಿಂದ ನೆಲಸಿರುವ ಹಲವಾರು ಅನ್ಯ ಭಾಷಾ ಮಹನೀಯರು ತಮಗೆ ಹಿಂದಿ, ಇಂಗ್ಲಿಷ್ ಮತ್ತು "ಲೋಕಲ್ ಲ್ಯಾಂಗುವೇಜ್ ಆದ ತಮಿಳು ಮಾತ್ರ ಗೊತ್ತು!" ಎಂದು ಬಹಿರಂಗವಾಗಿ ಬಹು ಹೆಮ್ಮೆಯಿಂದ ಸಾರುತ್ತಾರೆ!
ಇದು ಅವರಿಗೆ ಹೆಮ್ಮೆಯ ವಿಚಾರ ಆಗಿರಬಹುದು. ಆದರೆ, ಈ ತರಹದ ಬೂಟಾಟಿಕೆಯ ಮಾತುಗಳು ಕನ್ನಡಿಗರಾದ ನಮಗೆ ಅಪಮಾನದ ಸಂಗತಿ ಅನ್ನಿಸುತ್ತಾ ಇದೆ.
ನಾವು ಅವರು ಬಲ್ಲ ಭಾಷೆಗಳಲ್ಲಿ ಅವರೊಂದಿಗೆ ವ್ಯವಹರಿಸುವ ವ್ಯವಧಾನ ಮತ್ತು ಸೌಜನ್ಯಗಳನ್ನು ಇದುವರೆಗೆ ನಾವು ತೋರಿರುವಾಗ, ಅವರು ಕೂಡಾ ನಮ್ಮ ಭಾಷೆ ಕಲಿಯುವ ಬಗ್ಗೆ ಸ್ವಲ್ಪ ಒಲವು ತೋರಿಸಬೇಡವೆ?
ನಮ್ಮ ಸ್ನೇಹ ಮತ್ತು ಸೌಜನ್ಯಗಳನ್ನು ಅವರು ದುರುಪಯೋಗಿ ಪಡಿಸಿಕೊಳ್ಳದೇ, ಇಲ್ಲಿ ನೆಲಸಿರುವ ಇತರ ಭಾಷೆಗಳನ್ನು ಅವಲಂಬಿಸಿದ ನೆಲಸಿಗರು, ನಮ್ಮ ಮಾತೃ ಭಾಷೆಯಾದ ಕಸ್ತೂರಿ ಕನ್ನಡವನ್ನು ಕಲಿಯಲು ಒಲವು ತೋರಲೇ ಬೇಕು.
ಇತ್ತೀಚೆಗೆ, ಜಯನಗರದ ಒಂದು ಅಂಗಡಿಯಲ್ಲಿ ನಾನು ಒಂದು ಫಲಕ ನೋಡಿದೆ, ಅದರಲ್ಲಿ ಹೀಗೆ ಬರೆದಿದ್ದರು. "ತಾವು ನಮ್ಮ ಊರಿಗೆ ಬಂದು ಆರು ತಿಂಗಳು ಆಯಿತೇ? ದಯವಿಟ್ಟು ಕನ್ನಡದಲ್ಲೇ ನಮ್ಮೊಂದಿಗೆ ವ್ಯವಹರಿಸಿರಿ, ನಮ್ಮ ಸಹಾಯ ಸದಾ ನಿಮಗೆ ಇದ್ದೇ ಇದೆ. ನಿಮಗೆ ನಮ್ಮ ಸೌಹಾರ್ದ ಪೂರಕ ವಂದನೆಗಳು." ಎಂದು ಇತ್ತು.
ಆ ಫಲಕವನ್ನು ಕಂಡು ನನಗೆ ಬಹಳ ಹೆಮ್ಮೆ ಎನಿಸಿತು. ಇಂತಹಾ ಫಲಕಗಳು ನಮ್ಮ ಸೌಜನ್ಯ ಮತ್ತು ಭಾಷಾ ಪ್ರೇಮದ ದ್ಯೋತಕಗಳಲ್ಲವೆ?
ಈಗ ನಾವು ಕನ್ನಡ ಭಾಷೆ ಮಾತ್ರ ಗೊತ್ತು ಇದ್ದ ಹೆಚ್ಚಿನ ಹಿರಿಯ ಬೆಂಗಳೂರಿಗರು ಇದುವರೆಗೆ ಅನುಭವಿಸಿದ ಸಂಕಷ್ಟಗಳನ್ನು ನಾವು ಸ್ವಲ್ಪ ವಿಮರ್ಷೆ ಮಾಡಿ ನೋಡೋಣ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಮಾತ್ರ ಬಲ್ಲ ಸ್ಥಳೀಯರಿಗೆ ಒಳ್ಳೆಯ ಉದ್ಯೋಗ ಮತ್ತು ವ್ಯಾಪಾರದ ಆವಕಾಶಗಳು ಕಡಿಮೆಯಾಗುತ್ತಾ ಹೋದುವು.
ಹಾಗಾಗಿ ಕನ್ನಡಿಗರು ತಮ್ಮ ಸ್ಥಿರ ಆಸ್ತಿ ಮತ್ತು ಜಮೀನುಗಳನ್ನು ಅಂದಿನ ಮಾರುಕಟ್ಟೆಯ ಬೆಲೆಗೆ ಹೊರಗಿನಿಂದ ಬಂದವರಿಗೆ ಮಾರಿ, ಆ ಹಣದಿಂದ ತಮ್ಮ ಮಕ್ಕಳಿಗೆ "ಇಂಗ್ಲಿಷ್" ವಿದ್ಯಾಭ್ಯಾಸ ಕೊಡಿಸುವ ಕಡೆಗೆ ಗಮನ ಹರಿಸಲು ಶುರುಮಾಡಿದರು.
ಆಸ್ತಿ, ಜಮೀನುಗಳನ್ನು ಮಾರಿ ಬಂದ ಆ ಅಲ್ಪ ಹಣವೂ ಖರ್ಚಾದಾಗ, ತಮ್ಮ ಆಸ್ತಿ ಕೊಂಡವರಲ್ಲೇ, ತಾವೂ ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ತೊಡಗಿದರು.
ಹೀಗಾಗಿ, ಪರ ಭಾಷೆಯವರ ಪ್ರಾಭಲ್ಯ ನಮ್ಮ ಬೆಂಗಳೂರಿನಲ್ಲಿ ಬೆಳೆಯುತ್ತಾ ಹೋಯಿತು.
ಇಂಗ್ಲಿಷ್, ಹಿಂದಿ, ತಮಿಳು ಮತ್ತು ಉರ್ದೂ ಭಾಷೆಗಳು ನಮ್ಮಲ್ಲಿಗೆ ಬಂದು ನೆಲೆನಿಂತ ವಲಸಿಗ ಜನರೊಡನೆ ನಮ್ಮನ್ನು ಕೂಡಿಸುವ "ಸಂಪರ್ಕ ಸೇತು"ಗಳೇ ಆದವು.
ಈ ಕಾರಣಗಳಿಂದ ನಮ್ಮ ಕನ್ನಡದ ಜನರು ಬೇರೆಯವರ ಭಾಷೆಗಳನ್ನು ಕಲಿತು, ಅವರು ನೀಡಿದ ಕಾಯಕಷ್ಟದ ಕೆಲಸಗಳನ್ನು ಮಾಡುತ್ತಾ, ನಿಷ್ಠೆಯಿಂದ ಜೀವಿಸಲು ಪ್ರಯತ್ನಿಸಿದರು. ಹಾಗೆ ನೋಡಿದರೆ, ಇನ್ನೂ ನಾವು ದಿಶೆಯಲ್ಲಿ ದಿಶೆಯಲ್ಲಿ ಇನ್ನೂ ಮುಂದುವರಿಯುತ್ತಾ ಇದ್ದೇವೆಯೋ? - ಎಂದು ಅನ್ನಿಸುತ್ತಾ ಇದೆ.
ಕಳೆದ ಎರಡು ದಶಕಗಳಲ್ಲಿ ಕನ್ನಡಿಗರ ಮಕ್ಕಳು ಉತ್ತಮ ಶಾಲಾ ಕಾಲೇಜುಗಳನ್ನು ಸೇರಿಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಹೊಂದಿ ಡಿಗ್ರಿಗಳನ್ನು ಪಡೆದರೂ, ಕನ್ನಡಿಗ ಮಕ್ಕಳಿಗೆ ಒಳ್ಳೆಯ ಕೆಲಸ ಸಿಗುವುದು ಮಾತ್ರ ಮರೀಚಿಕೆಯೇ ಆಯಿತು.
ಈ ಇಂಗ್ಲಿಷ್ ಭಾಷೆಯನ್ನು ಬಲ್ಲ ಯುವ ಪೀಳಿಗೆಯವರು ತಮ್ಮ ಓದು ಮುಗಿಸಿ ಹೊರಬಂದಾಗ ಕಂಡಿದ್ದು ಇನ್ನೂ ಉಲ್ಬಣಿಸಿದ ನಿರುದ್ಯೋಗ ಸಮಸ್ಯೆ!
ತನ್ಮಧ್ಯೆ, ಇಲ್ಲಿ ನೆಲೆಸಿದ ದೈತ್ಯ ಕಂಪೆನಿಗಳು ಅನ್ಯ ಭಾಷಿಗರಿಗೆ ಮೊದಲ ಮಣೆ ಹಾಕಿ ಕೆಲಸ ಕೊಟ್ಟುವು. ಹೆಚ್ಚಿನ ಕೆಲಸಗಳು ಹೊರರಾಜ್ಯಗಳಿಂದ ಬಂದವರ ಪಾಲಿಗೇ ಹೋದುವು.
ಈ ಕಾರಣದಿಂದ "ಕನ್ನಡತನ ಮತ್ತು ಕನ್ನಡ ಭಾಷಾಪ್ರೇಮ" ಸಹಜವಾಗಿಯೇ ನಮ್ಮ ಷಹರದಿಂದ ನಿಧಾನವಾಗಿ ಮರೆಯಾಗ ತೊಡಗಿತು.
ಇದಕ್ಕೆಲ್ಲಾ ಮೂಲ ಕಾರಣ ಏನು?
ಇದಕ್ಕೆ ಕಾರಣ, ನಮ್ಮ ಹುಟ್ಟು ಗುಣಗಳಾದ ನಮ್ಮ ಸೌಜನ್ಯ, ವಿನಯ, ಅತಿಥಿಸತ್ಕಾರ ಮತ್ತು ಪರಭಾಷಾ ಸಹಿಷ್ಣುತೆಗಳು ಎನ್ನಬಹುದೇ?
"ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವಳು!" ಎಂಬ ಗಾದೆಯಂತೆ, "ನಾವು ಒಗ್ಗಟ್ಟಾಗಿ ನಿಂತು ಕೇಳಿದರೆ ಮಾತ್ರ ಕನ್ನಡಿಗರಿಗೆ ಕೆಲಸ ಸಿಕ್ಕೀತು!" ಎಂಬ ಅಂಶ ನಮಗೆ ಬಹು ತಡವಾಗಿ ಅರಿವಾಯಿತು.
ಇಂದಿನ "ವರ್ಲ್ಡ್ ಕ್ಲಾಸ್ ಸಿಟಿ" ಎನಿಸಿಕೊಳ್ಳುವ ಬೆಂಗಳೂರಿನ ಕನ್ನಡ ಪದವೀಧರ ಯುವಕನೊಬ್ಬನ ಒಂದು ಉದಾಹರಣೆಯನ್ನು ನಾನು ಇಲ್ಲಿ ನಿವೇದಿಸುತ್ತೇನೆ.
ಇಂದು "ಕನ್ನಡ ಭಾಷೆ ಮಾತ್ರ ಬಲ್ಲ" ಒಬ್ಬ ವಿದ್ಯಾವಂತನಿಗೆ ( ಉದಾಹರಣೆಗೆ, ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದ ವಿದ್ಯಾವಂತನಿಗೆ ) ನಮ್ಮ ರಾಜಧಾನಿಯಲ್ಲಿ ಒಂದು ಸಾಮಾನ್ಯ ಕೆಲಸ ಕೂಡಾ ಸಿಗುವ ಭರವಸೆ ಇಲ್ಲ!
ನಾನು ಬಹಳ ದುಃಖದಿಂದ ತಮಗೆ ಒಂದು ನಿಜ ಸಂಗತಿಯನ್ನು ವಿವರಿಸಲು ಬಯಸುತ್ತೇನೆ.
ಮೊನ್ನೆ ಒಬ್ಬ ಕನ್ನಡ ಮಾಧ್ಯಮದಲ್ಲಿ ಬಿ. ಏ. ಓದಿದ ಯುವಕನಿಗೆ ಒಂದು ಮಾಮೂಲಿ "ಏ. ಸಿ. ರೂಮ್" ಹೊಂದಿದ ಉಪಹಾರ ಗೃಹದಲ್ಲಿ ಸೂಪರ್‌ವೈಜರ್ ಕೆಲಸ ನಿರಾಕರಿಸಲ್ಪಟ್ಟಿತು! ಕಾರಣ ಏನು? ಎಂದರೆ, ಆತನಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಷ್ಟ ಆಗುತ್ತಾ ಇತ್ತು.
ಆ ಹುಡುಗ ತನ್ನ ಸರ್ಟಿಫ಼ಿಕೇಟ್‌ಗಳ ಕಡತ ತೋರಿಸುತ್ತಾ, "ಸ್ವಾಮೀ! ಕನ್ನಡ ಮಾಧ್ಯಮದಲ್ಲಿ ಓದಿ ಪದವಿ ಪಡೆದವರು ಇನ್ನು ಬೆಂಗಳೂರಲ್ಲಿ ಹೇಗೆ ಬದುಕಬೇಕು?" ಅನ್ನುತ್ತಾ ಇದ್ದ.
ಆಗ ಆ ಮಧ್ಯಮ ಗಾತ್ರದ ಹೋಟೆಲ್ ಮಾಲಿಕರು, "ಇಲ್ಲಿಗೆ ಕನ್ನಡದವೆರೇ ಊಟ ತಿಂಡಿಗೆ ಬರುತ್ತಾರೇನಯ್ಯಾ? ಬೇರೆ ಭಾಷೆಯವರು ನಮ್ಮಲ್ಲಿಗೆ ಬರುವುದೇ ಜಾಸ್ತಿ. ನಮ್ಮಲ್ಲಿ ಈಗ ಇಪ್ಪತ್ತೈದು ರೂಪಾಯಿಗಳಿಗೆ ಒಂದು ಮಸಾಲೆ ದೋಸೆ, ಹದಿನೈದು ರೂಪಾಯಿಗಳಿಗೆ ಕಾಫಿ! ಇಲ್ಲಿಗೆ ಬರುವ ಹೆಚ್ಚಿನ ಗಿರಾಕಿಗಳು ಕನ್ನಡ ತಿಳಿದಿದ್ದರೂ, ಅವರ ಅಂತಸ್ತಿಗೆ ಸರಿಯಾಗಿ ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ. ನಮ್ಮ ಹೋಟೆಲಿನ ಗ್ರಾಹಕರಿಗೆ ಇಂದು ಕನ್ನಡ ಮಾತ್ರ ಮಾತನಾಡುವ ಸುಪರ್‌ವೈಜರ್ ಬೇಡ! ಇಲ್ಲಿ ಕುತ್ತಿಗೆಗೆ ಟೈ ಕಟ್ಟಿಕೊಂಡು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವರಿಗೇ ಸುಪರ್‌ವೈಜರ್ ಕೆಲಸ ಕೊಡುತ್ತೇವೆ! ಸದ್ಯಕ್ಕೆ ನೀನು ಮೊದಲು ಒಂದು ಕೆಲಸ ಮಾಡು! "ಮಾತನಾಡುವ ಇಂಗ್ಲಿಷ್" (ಸ್ಪೋಕನ್ ಇಂಗ್ಲಿಷ್) ಕಲಿಸುವ ಹಲವಾರು ಕೋಚಿಂಗ್ ಶಾಲೆಗಳಿವೆ. ಅಲ್ಲಿ ಸೇರಿಕೊಂಡು "ಸ್ವಲ್ಪ ಬಟ್ಲರ್ ಇಂಗ್ಲೀಷ್" ಆದರೂ ಕಲಿತುಕೊಂಡು ಬಾ! ಆ ಮೇಲೆ ನೋಡೋಣ!" ಎಂದು ಕೆಲಸ ನಿರಾಕರಿಸಿದರು.
ಬೆಂಗಳೂರಿನಲ್ಲಿ ಕನ್ನಡ ಮಾತ್ರ ಬಲ್ಲ ಪದವೀಧರನಿಗೆ ಕೂಲಿ ಕೆಲಸ ಮಾತ್ರ ಗತಿಯೇ? - ಅಂತ ನನಗೆ ಅನ್ನಿಸಿತು.
ಹೀಗಿದೆ ನಮ್ಮ ಅಚ್ಚ ಕನ್ನಡಿಗರ ಪಾಡು.
ನಮ್ಮ ಶಹರದ ಥಳಥಳಿಸುವ "ಪ್ರತಿಷ್ಠಿತ" ಜಾಗಗಳಲ್ಲಿ ಕನ್ನಡ ಭಾಷೆ ಮಾತ್ರ ಬಲ್ಲವನನ್ನು ಮಾತನಾಡಿಸುವರು ಯಾರೂ ಇಲ್ಲ!
ಇದು ವಿಚಿತ್ರ ಆದರೂ ಸತ್ಯ.
ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ, ಹೈಟೆಕ್ ಆಸ್ಪತ್ರೆಗಳು. ಪಂಚತಾರಾ ಹೋಟೆಲ್‌ಗಳು, ದೊಡ್ಡ ದೊಡ್ಡ "ಮಾಲ್"ಗಳು, ಬಹು ಮಹಡಿಯ ಸಿನೆಮಾಗಳು, ಅನ್ಯದೇಶೀಯ ಮತ್ತು ಜಾಗತಿಕ ಹೆಸರಿನ ಫಲಕಗಳನ್ನು ಹೊತ್ತ ವ್ಯಾಪಾರೀ ಮಳಿಗೆಗಳು, ಫ಼ಾಸ್ಟ್ ಫ಼ೂಡ್ ಮಳಿಗೆಗಳು ಮತ್ತು ವಿದೇಶೀ ರೀತಿಯನ್ನು ಅನುಸರಿಸುತ್ತಾ ಇರುವ ಭಾರತೀಯ ಉಪಹಾರದ ತಾಣಗಳಲ್ಲಿ ನಮ್ಮ ಮಾತೃ ಭಾಷೆಯು "ಈಗಲೂ ಚಲಾವಣೆಯಾಗದ ನಾಣ್ಯ" ಎಂದು ಹೇಳಲು ನನಗೆ ನಾಚಿಕೆ ಆಗುತ್ತಾ ಇದೆ.
ಈ ಪರಿಸ್ಥಿತಿ ಹೇಗೆ ಉಂಟಾಯಿತು?
ಹೊರದೇಶಗಳಿಂದ ಬಂದವರು ಮತ್ತು ಹೊರರಾಜ್ಯಗಳಿಂದ ಬಂದವರು ಅವರಿಗೆ ಬಲ್ಲ ಭಾಷೆಗಳಲ್ಲಿ ಮತ್ತು ಇಂಗ್ಲಿಷ್ ಬಳಸಿಯೇ ನಮ್ಮೊಂದಿಗೆ ವ್ಯವಹರಿಸಲಿ! ಅದಕ್ಕೆ ನಾವು ಅಭ್ಯಂತರಿಸುವುದಿಲ್ಲ. ಜಗತ್ತಿನ ಜನರೆಲ್ಲಾ ವ್ಯಾಪಾರ ಅಥವಾ ವ್ಯವಹಾರಗಳಿಗೆ ನಮ್ಮ ರಾಜಧಾನಿಗೆ ಬರಲಿ!
ಅವರಿಗೆ ನಮ್ಮ ಸ್ವಾಗತ.
ಇಂದು ನಮ್ಮಲ್ಲಿ ನೆಲೆಸಿ "ಬೆಂಗಳೂರಿಗರೇ ಆಗಿರುವ" ನೆಲಸಿಗರು ನಮ್ಮ ನಾಡಿನ ಭಾಷೆಯಾದ ಕನ್ನಡವನ್ನು ಕಲಿಯಲು ಪ್ರಯತ್ನಿಸಲಿ. ಈ ನೆಲಸಿಗರು ತಮ್ಮ ಭಾಷೆಗಳನ್ನು ಅಥವಾ ಇಂಗ್ಲಿಷ್ ಭಾಷೆಯನ್ನು ನಮ್ಮ ಮೇಲೆ ಹೇರುವ ಪ್ರಯತ್ನಗಳನ್ನು ಕೈಬಿಡಲಿ.
ಪರಭಾಷಿಗರು ನಮ್ಮನ್ನೇ "ತಗ್ಗಿಸಿ ಬಗ್ಗಿಸಿ" ನಮ್ಮ ರಾಜಧಾನಿಯಲ್ಲೇ ನಮ್ಮನ್ನು ಆಳಲು ಪ್ರಯತ್ನಿಸುವ ಕ್ರಮಗಳನ್ನು ಕೈಬಿಡಬೇಕು. ಅವರುಗಳು ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಕಲಿಯಲು ಒಲವು ತೋರಬೇಕು. ಅವರು ಬಲ್ಲ ಭಾಷೆಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಅವರು ಇನ್ನು ಮುಂದೆ ನಿಲ್ಲಿಸಲೇ ಬೇಕಾದ ದಿನಗಳು ಸನ್ನಿಹಿತವಾಗುತ್ತಾ ಇವೆ.
ಇನ್ನು ಮುಂದೆ ನಮ್ಮ "ವಿದ್ಯಾವಂತರು" ಎನ್ನಿಸಿಕೊಂಡ ಕರ್ನಾಟಕದ ಜನರು ಆಂಗ್ಲ ಭಾಷೆ ಅಥವಾ ಅನ್ಯ ಭಾಷೆಗಳಲ್ಲಿ ಮಾತನಾಡುವುದೇ ತಮ್ಮ "ವಿದ್ಯೆ ಮತ್ತು ಅಂತಸ್ತುಗಳ ದ್ಯೋತಕ" ಎಂಬ ಭಾವನೆಯನ್ನು ಬಿಡಬೇಕು. ಕನ್ನಡವನ್ನೆ ಆದಷ್ಟು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸುವ ದೃಢ ನಿಶ್ಚಯವನ್ನು ಮಾಡಬೇಕು.
ಇಂದು ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ನಮ್ಮ ಮಕ್ಕಳನ್ನು ನಾವು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ವ್ಯವಹರಿಸಲು "ತಿಳಿದೋ ತಿಳಿಯದೆಯೋ" ಪ್ರೊತ್ಸಾಹಿಸುತ್ತಾ ಇದ್ದೇವೆ. ಆದರೆ ಅವರು ಈ ರೀತಿ ಆಂಗ್ಲ ಭಾಷೆಯಲ್ಲಿ ಸಮ್ಭಾಷಿಸುತ್ತಾ, ತಮ್ಮ ಮಾತೃಭಾಷೆ ಮತ್ತು ಕನ್ನಡತನವನ್ನು ಮರೆಯದೇ ಇರಲಿ.
ನಮ್ಮ ಮನೆಗಳಲ್ಲಿನ ಆಂಗ್ಲ ಮಾಧ್ಯಮದ ಶಾಲೆಗಲಲ್ಲಿ ಓದುತ್ತಾ ಇರುವ ಹೆಚ್ಚಾಗಿ ಆಂಗ್ಲ ಭಾಷೆಯಲ್ಲೇ ಮಾತನಾಡಿಕೊಂಡು, ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸುತ್ತಾ ಇರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಾ ಇದ್ದೇವೆ. ಅವರು ಆಂಗ್ಲ ಭಾಷೆಯಲ್ಲಿ ವ್ಯವಹರಿಸುವಷ್ಟು ಪ್ರಾವೀಣ್ಯವನ್ನು ಅವರು ಖಂಡಿತವಾಗಿ ಪಡೆಯಲಿ, ಇಂದಿನ ಜಗತ್ತು ವಿಶಾಲ. ಆಂಗ್ಲಭಾಷೆ ಗೊತ್ತಿಲ್ಲದೇ ಅವರು ಪರದೇಶಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ಕೆಲಸ ಮಾಡಲು ಕಷ್ಟ ಆಗಬಹುದು.
ಆದರೆ, ಅವರುಗಳು ನಮ್ಮ ಮನೆಗಳಲ್ಲಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಕಡ್ಡಾಯವಾಗಿ ಆಡುವಂತೆ ನಾವು ಅವರನ್ನು ಪ್ರೇರೇಪಿಸಬೇಕು. ಕನ್ನಡ ವಾರ್ತಾ ಪತ್ರಿಕೆಗಳು ಮತ್ತು ಕನ್ನಡ ಸಾಹಿತ್ಯವನ್ನು ಅವರು ಓದಲು ನಾವು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯ ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳಿಗೆ ನಾವು ನಮ್ಮ ಮನೆಗಳಲ್ಲಿ ಸ್ವಲ್ಪ ಆದ್ಯತೆ ನೀಡಬೇಕು.
ಇತರರೊಂದಿಗೆ ಮಾತನಾಡುವಾಗ ಮತ್ತು ದೂರವಾಣಿಯಲ್ಲಿ ಸಂಬಾಷಿಸುವಾಗ ವಾಗ ಶುದ್ಧ ಕನ್ನಡ ಬಲಸುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು.
ಇಂದು ನಾವು ಆಡುವ ಕನ್ನಡದಲ್ಲಿ ಬಳಸುವ ಆಂಗ್ಲ ಭಾಷೆಹಾಗೂ ಇತರೇ ಭಾಷೆಗಳ ಶಬ್ದಗಳ ಬದಲಿಗೆ ಕನ್ನಡ ಭಾಷೆಯ ಶಬ್ದಗಳನ್ನೇ ಉಪಯೋಗಿಸಬೇಕು.
ಇಂದಿನ ಪರಿಸ್ಥಿತಿಗೆ ಸರಿಯಾಗಿ, ಹೆಚ್ಚಿನ ತಂದೆತಾಯಿಗಳು "ನಾಳೆ ನಮ್ಮ ಮಕ್ಕಳಿಗೆ ಓದಿ ಒಳ್ಳೆಯ ಕೆಲಸ ಸಿಗಬೇಕು!" ಎಂಬ ದೃಷ್ಟಿಯಿಂದ ತುಂಬಾ ಹಣ ವ್ಯಯಿಸಿ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಓದಿಸುತ್ತಾ ಇದ್ದೇವೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಇಲ್ಲದೇ ಇದ್ದರೆ ನಮ್ಮ ಮಕ್ಕಳಿಗೆ ಒಳ್ಳೆಯ ಉದ್ಯೋಗದ ಭರವಸೆ ಇಲ್ಲ. ಅವರ ಆಂಗ್ಲ ಭಾಷಾ ಜ್ಞಾನ ನಾಳೆ ಅವರು ಪ್ರವೇಶಿಸುತ್ತಿರುವ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರಗಲಿಗೆ ಮೀಸಲಾಗಿರಲಿ. ಅವರು ತಮ್ಮ ಕನ್ನದತನ ಮರೆಯದೇ ಇರಲಿ.
ಆಂಗ್ಲ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾ ಇರುವ ಪೋಷಕರನ್ನಾಗಲೀ ಅಥವಾ ಓದುವ ಮಕ್ಕಳನ್ನಾಗಲೀ ನಾವು ಈಗ ದೂರಿ ಪ್ರಯೋಜನ ಇಲ್ಲ. ನಮ್ಮ ಇಂದಿನ ಸಾಮಾಜಿಕ ಪರಿಸ್ಥಿತಿ ಹೀಗೆ ಇದೆ. ಆಂಗ್ಲ ಭಾಷಾ ಜ್ಞಾನದ ಜತೆಗೆ ಅವರ ಕನ್ನಡ ಜ್ಞಾನ ಮತ್ತು ಪ್ರೇಮಗಳೂ ಬೆಳೆಯಲಿ.
ಕನ್ನಡಿಗರಾದ ನಾವು "ತಲೆ ಎತ್ತಿ ಬಾಳುವ ಕಾಲ" ಈಗ ಸನ್ನಿಹಿತವಾಗುತ್ತಾ ಇದೆ! ಕನ್ನಡಿಗರ ಸ್ವಾಭಿಮಾನ ಎಚ್ಚತ್ತುಕೊಳ್ಳುತ್ತಾ ಇದೆ. ಇಂದು ಹೆಚ್ಚಿನ ಕನ್ನಡಿಗರು ಕನ್ನಡದದಲ್ಲೇ ಮಾತನಾಡಿ ವ್ಯವಹಾರ ಮಾಡಲು ಇಷ್ಟ ಪಡುತ್ತಾ ಇದ್ದಾರೆ. ಕನ್ನಡದ ಪುಸ್ತಕ ಹಾಗೂ ಪತ್ರಿಕೆಗಳನ್ನು ಕೊಂಡು ಓದುತ್ತಾ ಇದ್ದಾರೆ.
ನಮ್ಮ ಜನರಲ್ಲಿ ಕನ್ನಡ ಅಭಿಮಾನ ಹೆಚ್ಚುತ್ತಾ ಇದೆ. ಮಾರುಕಟ್ಟೆಗಳಲ್ಲಿ ಮತ್ತು ಹೆಚ್ಚಿನ ಅಂಗಡಿಗಳಲ್ಲಿ ಕನ್ನಡದ ಮಾತು ಕೇಳಿಬರುತ್ತಾ ಇವೆ. ಹಿಂದೆ ಬೆಂಗಳೂರಿನ "ಇಂಗ್ಲಿಷ್" ಪ್ರದೇಶಗಳೆಂದೇ ಹೆಸರಾದ ಬ್ರಿಗೇಡ್ ರಸ್ತೆ ಮತ್ತು ಮಹಾತ್ಮಾ ಗಾಂಧಿ ರಸ್ತೆಗಳಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಲು ಇಂದು ಸಾಧ್ಯ ಆಗಿದೆ.
ಕನ್ನಡ ಚಲನ ಚಿತ್ರಗಳು ಈಗ ಜನಪ್ರಿಯವಾಗಿ ಬಹಳ ಸಮಯ ಪ್ರದರ್ಶನ ನೀಡಿ ಹಣ ಮತ್ತು ಹೆಸರು ಸಂಪಾದಿಸುತ್ತಾ ಇವೆ. ಹಿಂದೀ ಸಿನೆಮಾದ ಗಾಯಕರು, ನಿರ್ದೇಶಕರು, ನಟ ನಟಿಯರು ಕನ್ನಡ ಚಿತ್ರ ಕ್ಷೇತ್ರದ ಕಡೆಗೆ ತಮ್ಮ ಒಲವು ತೋರುತ್ತಾ ಇದ್ದಾರೆ,
ಟ್ಯಾಕ್ಸಿ ಮತ್ತು ಆಟೋ ಚಾಲಕರು ಇಂದು ಕನ್ನಡದಲ್ಲೇ ಮಾತನಾಡುತ್ತಾರೆ. ತರಕಾರಿ, ಹೂವು, ಹಣ್ಣು ಮಾರುವವರು ಕನ್ನಡದಲ್ಲೇ ವ್ಯವಹಾರ ಮಾಡುವುದು ಕಂಡು ಬರುತ್ತಾ ಇದೆ.
ಈಗ ಬೆಳೆಯುತ್ತಾ ಇರುವ ಕನ್ನಡ ಅಭಿಮಾನವನ್ನು ಈಗ ನಾನು "ಕನ್ನಡದ ಅಭಿಮನ್ಯು" ಎಂದು ಹೆಸರಿಸಿ ಕರೆಯುತ್ತಾ ಇದ್ದೇನೆ.
ಕನ್ನಡದ ಅಭಿಮಾನಿ ಬಾಲಕ ಅಭಿಮನ್ಯು ಇನ್ನೂ ಹದಿಹರೆಯದ ಹುಡುಗ.
ಆದರೂ, ಇಂದು ಆತ ಧೈರ್ಯವಾಗಿ ಇತರೇ ಭಾಷಿಗರಿಗೆ ಸರಿಸಮನಾಗಿ ನಿಂತು ಕನ್ನಡದ ಉಳಿವಿಗೋಸ್ಕರ ಅವಿರತವಾಗಿ ಹೋರಾಡುತ್ತಾ ಇದ್ದಾನೆ.
ಇನ್ನು ಮುಂದೆ ನಮ್ಮ ಕನ್ನಡದ ಅಭಿಮನ್ಯುವು ಇದುವರೆಗೆ ಅಬೇಧ್ಯವಾಗಿದ್ದ ಪಂಚ ತಾರಾ ಮತ್ತು ಬಹು ರಾಷ್ಟ್ರೀಯ ಸ್ವಾಮ್ಯದ ಪ್ರತಿಷ್ಟಿತ ಕೋಟೆಗಳ ಒಳಗೆ ನುಗ್ಗಿ ಅಲ್ಲಿ ತನ್ನ ಕನ್ನಡತನವನ್ನು ಮೆರೆದು ಅಲ್ಲಿ ಅವನು ವಿಜ್ರಂಭಿಸಬೇಕು.
ಇದು ನನ್ನ ಆಶಯ.
ತಾವು ಕೂಡಾ ಕೈಜೋಡಿಸಿ "ಕನ್ನಡದ ಅಭಿಮನ್ಯುವನ್ನು ದೀರ್ಘಾಯುವಾಗು!" ಎಂದು ಹರಸುವಿರಾ?
- ಎಸ್. ಎಮ್. ಪೆಜತ್ತಾಯ
 ಬೆಂಗಳೂರು
 ೨೩/೦೪ /೨೦೦೮

Thursday, May 14, 2015

ಸುದ್ದಿಯನ್ನೂ ಬಿತ್ತಿ ಬೆಳೆಯುವವರು

ಇಂದು ಪತ್ರಕೆಯೊಂದರಲ್ಲಿ ಈ ಸುದ್ದಿಯನ್ನು ಓದಿದಾಗ, ಸುಮಾರು ಹನ್ನೆರಡು ವರ್ಷಗಳ ಹಿಂದೆ ನಾನು ಬರೆದಿದ್ದ ಒಂದು ಸಣ್ಣ ಕಥೆ ನೆನಪಾಯಿತು. ಅದು thatskannada.com ನಲ್ಲಿ ಪ್ರಕಟವಾಗಿತ್ತು. ಎಂಥಾ ಕೊಇನ್ಸಿಡೆನ್ಸ್!!!
ಒಮ್ಮೆ ಓದಿ ನೋಡಿ.

ಬಿರುಬೇಸಿಗೆಯ ಮಧ್ಯಾಹ್ನದ ಬಿಸಿಲಿನಿಂದಾಗಿ ನಿದ್ದೆಯೂ ಬಾರದೆ ಬೆವರಿನಿಂದ ತೊಯ್ಯುತ್ತಾ ಛಾವಣಿಯನ್ನು ದಿಟ್ಟಿಸುತ್ತಾ ಬಿದ್ದುಕೊಂಡಿದ್ದ ರಂಗರಾಜನಿಗೆ ತನ್ನ ಯೋಚನಾ ಲಹರಿ ದಿಕ್ಕು ತಪ್ಪಿದ್ದು ಗೊತ್ತಾಗಿ ಹಣೆ ತೀಡಿಕೊಂಡ. ಎರಡು ವರ್ಷದ ಹಿಂದೆ ವಿಶ್ವಕನ್ನಡ ಪತ್ರಿಕೆ ಪ್ರಾರಂಭವಾಗಿ ರಂಗರಾಜ ಆ ತಾಲ್ಲೋಕಿನ ಅಧಿಕೃತ ವರದಿಗಾರನಾಗಿ ನೇಮಕಗೊಂಡಾಗ ಖುಷಿಯಿಂದ ಕುಣಿದಿದ್ದ. ಪತ್ರಕರ್ತನಾಗಬೇಕೆಂಬ ಮಹದಾಸೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿಕೊಂಡು ಮೂರ್‍ನಾಲ್ಕು ವರ್ಷ ಕೆಲಸವಿಲ್ಲದೆ ಅಲೆದುಕೊಂಡಿದ್ದವನಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ವರದಿಗಾರನಾಗಿ ನೇಮಕಗೊಂಡಾಗ ಸ್ವರ್ಗ ಆತನ ಮೂಗಿನ ನೇರಕ್ಕೇ ಇಳಿದಿತ್ತು. ಪ್ರಾರಂಭದ ನಾಲ್ಕೈದು ತಿಂಗಳು ಚೆನ್ನಾಗಿಯೇ ನಡೆದಿತ್ತು. ತಾನು ಬರೆದ ಸುದ್ದಿ ಬಂದಾಗ ಸ್ನೇಹಿತರ ಬಳಿ ಹೇಳಿಕೊಂಡು ಹೆಮ್ಮೆಪಡುತ್ತಿದ್ದ. ಕೆಲವೊಮ್ಮೆ ಮೊದಲೇ ಸ್ನೇಹಿತರ ಬಳಿ ತಾನು ಬರೆದ ಸುದ್ದಿ ಬರುತ್ತದೆ ಎಂದು ಜಂಭಪಟ್ಟೂ ಬರದೇ ಇದ್ದಾಗ ಮುಖ್ಯ ಕಛೇರಿಯ ಸುದ್ದಿ ಸಂಪಾದಕನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ‘ಅವರು ಗ್ರಾಮೀಣ ಪ್ರದೇಶದವರನ್ನು ನೆಗ್ಲೆಕ್ಟ್ ಮಾಡ್ತಿದಾರೆ. ಅವರು ಇಂಟರ್‌ನೆಟ್ಟಲ್ಲಿ ಸಿಗೊ ಸುದ್ದಿಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಿ ಪ್ರಿಂಟ್ ಮಾಡ್ತಾರೆ’ ಎಂದು ತನಗೆ ಇಂಟರ್‌ನೆಟ್ ಬಗ್ಗೆಯೂ ಗೊತ್ತು ಎಂಬುದನ್ನು ಪರೋಕ್ಷವಾಗಿ ಪ್ರಸ್ಥಾಪಿಸುತ್ತಿದ್ದ.
ಮೊದಲೇ ಬೋಳೆ ಸ್ವಭಾವದವನಾಗಿದ್ದ ರಂಗರಾಜನಿಗೆ ದಿನಕಳೆದಂತೆ ಪತ್ರಿಕೆಯ ಸುದ್ದಿ ಸಂಪಾದಕರುಗಳ ಮೇಲೆ ಸಿಟ್ಟು ಹೆಚ್ಚಾಗತೊಡಗಿತು. ಬೇಕೆಂದೇ ನಾನು ಕಳುಹಿಸಿದ ಸುದ್ದಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂಬ ಭಯಂಕರ ಅನುಮಾನ ಬಂದು, ತಾನು ಕಳುಹಿಸುತ್ತಿರುವ ಸುದ್ದಿಯ ಪ್ರಾಮುಖ್ಯತೆಯ ಬಗ್ಗೆಯಾಗಲೀ, ಅದರ ಗುಣಮಟ್ಟದ ಬಗ್ಗೆಯಾಗಲೀ ಚಿಂತಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿದ್ದ.
*    *   *  * * *  *   *    *
ವಿಶ್ವಕನ್ನಡ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಬೆಂಗಳೂರಿನಲ್ಲಿ ನಡೆದಾಗ, ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸುವ ಬಗ್ಗೆ ಒಂದು ವಿಚಾರಸಂಕಿರಣವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಎಲ್ಲಾ ತಾಲ್ಲೋಕುಗಳ ಪತ್ರಿಕಾ ಹಂಚಿಕೆದಾರರು ಭಾಗವಹಿಸಿದ್ದರು. ರಂಗರಾಜನ ತಾಲ್ಲೋಕಿನಿಂದ ಹಂಚಿಕೆದಾರನಾದ ಭರಮಪ್ಪ ಭಾಗವಹಿಸಿದ್ದ. ರಂಗರಾಜನಿಗೂ ಭಾಗವಹಿಸುವ ಆಸೆಯಿತ್ತಾದರೂ, ಟಿ.ಎ., ಡಿ.ಎ. ಕೇವಲ ಏಜಂಟರಿಗೆ ಮೀಸಲಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಆಯಾಯ ಪ್ರದೇಶದ ಸುದ್ದಿಗಳಿಗೆ ಹೆಚ್ಚಿನ ಆಧ್ಯತೆ ಕೊಡುವುದರಿಂದ ಗ್ರಾಮ ಮಟ್ಟದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಬಹುದು ಎಂಬುದು ವಿಚಾರ ಸಂಕಿರಣದ ನಂತರ ಮೂಡಿದ ಒಮ್ಮತಾಭಿಪ್ರಾಯ. ಆದರೆ ಪಿಕಲಾಟಕ್ಕೆ ಬಂದಿದ್ದು ಮಾತ್ರ ರಂಗರಾಜನಿಗೆ.
ಅದು ಆಗಿದ್ದು ಹೀಗೆ. ಪತ್ರಿಕಾ ಏಜೆಂಟರ ಸಮಾವೇಶ ಮುಗಿಸಿಕೊಂಡು ಬಂದ ಭರಮಪ್ಪ ರಂಗರಾಜನಿಗೆ “ಸ್ವಾಮಿ ನೀವು ವಿಶ್ವಕರ್ನಾಟಕ ಪತ್ರಿಕೆಗೆ ನಮ್ಮ ತಾಲ್ಲೂಕಿನ ಅಧಿಕೃತ ವರದಿಗಾರರಾಗಿದ್ದೀರ. ಆದರೆ ನೀವು ನಮ್ಮ ಹಳ್ಳಿಗಳ ಯಾವುದೇ ಸುದ್ದಿಯನ್ನು ವರದಿ ಮಾಡುತ್ತಿಲ್ಲ. ಹೀಗಾದರೆ ಪತ್ರಿಕೆಗಳನ್ನು ಮಾರುವುದು ಹೇಗೆ? ನಿಮಗೆ ಗೊತ್ತಾ? ಅತ್ಯಂತ ಕಡಿಮೆ ಪತ್ರಿಕೆ ಮಾರುವ ತಾಲ್ಲೂಕುಗಳಲ್ಲಿ ನಮ್ಮದೇ ಮೂರನೆಯದು. ನೀವು ಸ್ವಲ್ಪ ಗಮನ ಕೊಟ್ಟಿರಾದರೆ, ನಮ್ಮ ಊರಿನ ಸುದ್ದಿ ಬಂದಿದೆ ಎಂದು ಜನ ಪತ್ರಿಕೆ ಕೊಂಡು ಓದುತ್ತಾರೆ. ಅಲ್ಲವೇ?" ಎಂದು ಆಗಾಗ ಪೀಡಿಸುತ್ತಿದ್ದ. ಒಬ್ಬನೇ ಇದ್ದಾಗ ಭರಮಪ್ಪ ಹೀಗೆಂದಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಆಸಾಮಿ ಇವನಲ್ಲ. ಸಿಕ್ಕ ಸಿಕ್ಕವರ ಎದುರಿಗೆಲ್ಲಾ ಭರಮಪ್ಪ ಪೀಡಿಸಲಾರಂಭಿಸಿದಾಗ ರಂಗರಾಜನೂ ಏನಾದರೂ ಸುದ್ದಿಗಳನ್ನು ಕಳುಹಿಸಲೇಬೇಕೆಂದು ತಲೆಕೆಡಿಸಿಕೊಳ್ಳತೊಡಗಿದ.
*    *   *  * * *  *   *    *
ಈ ವರ್ಷವೂ ಮುಂಗಾರು ಕೈಕೊಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಬಿಸಿಲಿನ ಬೇಗೆ ಹೆಚ್ಚಾದಂತೆ ರಂಗರಾಜನಿಗೆ ಸುದ್ದಿಯ ಬರವೂ ಹೆಚ್ಚುತ್ತಿತ್ತು. “ಛೆ, ಈ ಹಳ್ಳಿಗಳಲ್ಲಿ ಜನ ಜೀವನ ಸತ್ತು ಹೋಗಿದೆ. ಇಲ್ಲಿ ಯಾರು ಬಡಿದಾಡಿ ಸಾಯುವುದೂ ಇಲ್ಲ. ಒಂದು ಗಲಾಟೆ ಇಲ್ಲ. ಯಾವ ಕ್ರಾಂತಿಯೂ ಇಲ್ಲ. ಒಟ್ಟಾರೆಯಾಗಿ ಇಡೀ ವ್ಯವಸ್ಥೆಯಲ್ಲಿ ಮೂವ್‌ಮೆಂಟ್ ಅನ್ನೋದು ಸತ್ತು ಹೋಗಿದೆ. ಬರೆದರೆ ಅವನ ಮಗನಿಗೆ ಇವನ ಮಗಳ ಮದುವೆಯಾಯಿತು. ಆತನ ಕೋಳಿಯನ್ನು ನರಿ ಹಿಡಿಯಿತು ಇಂತಹ ಸುದ್ದಿಗಳನ್ನೇ ಬರೆಯಬೇಕು. ಇಲ್ಲಿ ಕದ್ದು ಬಸುರಾದರೂ ಗುಟ್ಟು ಬಿಟ್ಟುಕೊಡಲ್ಲ. ಅದೇ ಸಿಟಿಯಲ್ಲಾದರೆ ಬಸುರಿಯಾದ ಹುಡುಗಿಯೇ ಸ್ಟೇಶನ್ನಿಗೆ ಹೋಗಿ ಕಂಪ್ಲೇಂಟ್ ಕೊಡುತ್ತಾಳೆ. ಸಿಟಿಯವರು ಸುದ್ದಿ ಮಾಡದೆ ಏನು ಮಾಡುತ್ತಾರೆ" ಎಂದು ತನ್ನ ಅಸಹನೆಯ ನಂಜನ್ನು ತಾನೆ ತಿನ್ನುತ್ತಿದ್ದ.
*    *   *  * * *  *   *    *
ಹೀಗಿರುವಾಗ, ಮೇ ತಿಂಗಳ ಕೊನೆಯ ಒಂದು ದಿನ ಊರಿನಲ್ಲಿ ಹರಡಿದ್ದ ಒಂದು ಸುದ್ದಿ ರಂಗರಾಜನ ಗಮನ ಸೆಳೆಯಿತು.
ದಿನ ಬೆಳಿಗ್ಗೆ ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ಜಯರಾಮ ಎಂಬ ಹುಡುಗ ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ಆತನಿಗೆ ಶೇಕಡಾ ತೊಂಬತ್ಮೂರು ಅಂಕಗಳು ಬಂದಿದ್ದವು. ಜಯರಾಮನ ತಂದೆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಓದಿಸುತ್ತಿದ್ದರು. ಇದೇ ಸುದ್ದಿ ಸುತ್ತಮುತ್ತಲ ಊರವರ ಬಾಯಲ್ಲೂ ಎಲೆ ಅಡಿಕೆಯಾಗಿ ಜಿಗಿಯಲ್ಪಡುತ್ತಿದ್ದರೆ, ರಂಗರಾಜನಿಗೆ ಖಚಿತವಾಗಿ ಇದನ್ನು ಸುದ್ದಿ ಮಾಡಬಹುದು ಎನ್ನಿಸಿತ್ತು. ತಕ್ಷಣ ಎದ್ದು ಪೆನ್ನು ಪ್ಯಾಡು ತಗೆದುಕೊಂಡು ನಿಜವಾದ ಪತ್ರಕರ್ತನ ಗತ್ತಿನಲ್ಲಿ ಸ್ಕೂಲಿನ ಕಡೆಗೆ ನಡೆಯತೊಡಗಿದ.
“ಅವನವ್ವನ್ ಇದು ಹೇಗೆ ಸುದ್ದಿಯಾಗಲ್ಲವೊ ನಾನು ನೋಡ್ತಿನಿ. ಬರಿ ಸುದ್ದಿಯಾದರೆ ಸಾಲದು. ಭರ್ಜರಿ ಸುದ್ದೀನೆ ಮಾಡಬೇಕು, ಸಿಟಿಯವರ ತಲೆ ಮೇಲೆ ಹೊಡೆದ ಹಾಗೆ" ಎಂದುಕೊಂಡ. ಜಯರಾಮನ ಕಷ್ಟವನ್ನು ಕಣ್ಣಿಗೆ ಕಟ್ಟಿದಂತೆ ಬರೆದು ಹೆಸರು ಮಾಡಬೇಕು ಅಂದುಕೊಂಡು ಸ್ಕೂಲಿಗೆ ಬಂದಾಗ ಹೆಡ್ಮಾಸ್ಟರು ಕಿವಿಯವರೆಗೂ ಬಾಯಿ ತೆರೆದು ಗುಡುಗನ್ನೂ ನಾಚಿಸುವಂತೆ ನಗುತ್ತಾ ಸ್ವಾಗತಿಸಿ “ನೀವು ಬಂದೇ ಬರ್ತೀರ ಅಂತ ನಾನು ಕಾಯ್ತಿದ್ದೆ. ಬನ್ನಿ" ಎಂದರು.
“ಸಾರ್, ಜಯರಾಮನ ಬಗ್ಗೆ ಪೇಪರ್‍ನಲ್ಲಿ ಬರೀತಾ ಇದ್ದೀನಿ. ಅವನದೊಂದು ಮಾರ್ಕ್ಸ್ ಲಿಸ್ಟ್ ಅಟೆಸ್ಟ್ ಮಾಡಿ ಕೊಡಿ" ಎಂದು ನೇರವಾಗಿ ಕೇಳಿದ ರಂಗರಾಜನ ಮಾತಿನಿಂದ ಪೆಚ್ಚಾದರೂ ತೋರಿಸಿಕೊಳ್ಳದ ಹೆಡ್ಮಾಸ್ಟರು “ಬರೀರಿ ಬರೀರಿ. ನಮ್ಮ ಸ್ಕೂಲಿನ ಹುಡುಗ ಬಡತನದಲ್ಲೂ ಕಷ್ಟಪಟ್ಟು ಓದಿದಾನೆ. ನಾವೂ ಬಹಳ ಮುತುವರ್ಜಿ ವಹಿಸಿ ಪಾಠ ಮಾಡಿದಿವಿ. ಅದನ್ನು ಬರೀರಿ" ಎಂದು ಹಲ್ಲು ಗಿಂಜಿದರು. ರಂಗರಾಜ ಮನಸ್ಸಿನಲ್ಲೇ ‘ಕಳ್ಳ ನನ್ಮಗ. ಇವನ ಬಗ್ಗೆ ಬರೀಬೇಕಂತೆ’ ಎಂದುಕೊಂಡ. ಜಯರಾಮನ ಅಂಕಗಳನ್ನು ಬಿಳಿಹಾಳೆಯ ಮೇಲೆ ಬರೆಯುತ್ತಾ “ಪತ್ರಕರ್ತರೆ ನಂದು ತಿಂಡಿ ಆಗಿಲ್ಲ. ಹಾಗೆ ಸಿಟಿ ಕಡೆ ಹೋಗಿ ತಿಂಡಿ ಕಾಫಿ ಮಾಡೋಣ. ನಾನು ನಿಮ್ಮ ಜೊತೆ ಬರತೀನಿ" ಎಂದ ಹೆಡ್ಮಾಸ್ಟರ ಮಾತಿನಿಂದ ಖುಷಿಯಾದ ರಂಗರಾಜ “ಆಗಲಿ ಸಾರ್. ನಿಮ್ಮ ಸ್ಕೂಲಿಗೆ ಡಿಸ್ಟಿಂಕ್ಷನ್ ಬಂದಿರೊ ಖುಷಿಯಲ್ಲಿ ನೀವು ಸ್ವೀಟು ಕೊಡಿಸ್ಬೇಕು" ಎಂದ. “ಆಗಲಿ, ಆಗಲಿ" ಎನ್ನುತ್ತ, ಬರೆದು ಮುಗಿಸಿ ಸಹಿ ಮಾಡುವಾಗ ತಮ್ಮ ಹೆಸರು ಸ್ಪಷ್ಟವಾಗಿ ಕಾಣುವಂತೆ ದಪ್ಪವಾಗಿ ಮಾಡಿ ಸೀಲು ಹಾಕಿ ಕೊಟ್ಟರು.
ತಾವು ಎಷ್ಟು ಕಷ್ಟಪಟ್ಟು ಪಾಠ ಮಾಡುತ್ತೇವೆ. ನಮ್ಮ ಶಾಲೆಗೆ ಡಿಸ್ಟಿಂಕ್ಷನ್ ಬರಲು ಪಟ್ಟ ಕಷ್ಟಗಳೇನು ಹೀಗೆ ಮುಂತಾದವುಗಳನ್ನು ವರ್ಣರಂಜಿತವಾಗಿ ಹೇಳುತ್ತಾ ಹೆಡ್ಮಾಸ್ಟರು ನಡೆಯುತ್ತಿದ್ದರೆ ‘ಹಾಂ, ಹೂಂ, ಹೌದು’ ಹೀಗೆ ಪ್ರತಿಕ್ರಿಯಿಸುತ್ತಾ ಸಾಗುತ್ತಿದ್ದ ರಂಗರಾಜನಿಗೆ, ಅವರು ತಿಂಡಿ ಕೊಡಿಸುತ್ತಾರೆ ಎಂದು ನೆನಪಾದಾಗ ಮಾತ್ರ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾ ನಡೆಯುತ್ತಿದ್ದ. ಆದರೆ ಅವನ ಮನಸ್ಸಿನಲ್ಲಿ ಯೋಚಿಸುತ್ತಿದ್ದುದೇ ಬೇರೆ. ಸುದ್ದಿಯನ್ನು ಬರೆಯುವಾಗ ಸಂಪಾದಕರುಗಳು ಮೆಚ್ಚುವಂತೆ ಬರೆಯಬೇಕು ಎನ್ನಿಸಿ, ಅದು ಹೇಗೆ ಎಂದು ತಲೆ ಕೆಡಿಸಿಕೊಂಡ. ಹೆಡ್ಮಾಸ್ಟರು ಕೊಡಿಸಿದ ಮಸಾಲೆ ದೋಸೆ ತಿಂದು ಕಾಫಿ ಕುಡಿಯುವಾಗ, ‘ಜಯರಾಮ ಎಲ್ಲಾ ಪತ್ರಿಕೆಗಳನ್ನು ಹಂಚುತ್ತಿದ್ದ. ಆದರೆ ನನ್ನ ಸುದ್ದಿಯಲ್ಲಿ ಜಯರಾಮ ವಿಶ್ವಕನ್ನಡ ಪತ್ರಿಕೆಯನ್ನು ಹಂಚುತ್ತಿದ್ದ ಹುಡುಗ ಎಂಬುದನ್ನು ಹೈಲೈಟ್ ಮಾಡಿ ಬರೆಯಬೇಕು. ಅದರಿಂದ ಪತ್ರಿಕೆಯವರಿಗೂ ಖುಷಿಯಾಗುತ್ತದೆ’ ಅಂದುಕೊಂಡ.
*    *   *  * * *  *   *    *
ಹೆಡ್ಮಾಸ್ಟರಿಗೆ ಗುಡ್‌ಬೈ ಹೇಳಿ ಮನೆಯ ಕಡೆ ತಿರುಗಿದವನಿಗೆ ಕಂಡಿದ್ದು ವಿಶ್ವಕನ್ನಡ ಪತ್ರಿಕೆಯ ಹಂಚಿಕೆದಾರ ಭರಮಪ್ಪ. “ಹೋ ಪತ್ರಕರ್ತ ರಂಗರಾಜ ಅವರು. ಜಯರಾಮನ ಬಗ್ಗೆ ಪತ್ರಿಕೇಲಿ ಒಳ್ಳೆ ಸುದ್ದಿ ಮಾಡಬೇಕಂತೀದಿರಂತೆ. ಮಾಡಿ ಮಾಡಿ. ಸಂತೋಷ ಅಲ್ಲವೇ? ನಮ್ಮೂರ ಹುಡುಗ. ನನ್ನ ಬಳಿಯೇ ಪೇಪರ್ ತಗೊಂಡು ಮನೆಮನೆಗೆ ಹಾಕುತ್ತಿದ್ದ. ಅಂದ ಹಾಗೆ ಅವನನ್ನು ಒಂದು ಸಾರಿ ಬೇಟಿ ಮಾಡ್ಬಿಡಿ. ಅವನದೊಂದು ಫೋಟೊ ಬೇಕಾದರೆ ಕೊಡಿಸ್ತಿನಿ ಬನ್ನಿ" ಎಂದರು. ಭರಮಪ್ಪನ ಸಲಹೆ ರಂಗರಾಜನಿಗೂ ಸರಿಯೆನ್ನಿಸಿತು. “ಅಷ್ಟು ಮಾಡಿ. ಇನ್ನು ಒಳ್ಳೇದೆ ಆಯಿತು" ಎಂದ.
ದಾರಿಯಲ್ಲಿ ನಡೆಯುತ್ತಿದ್ದಾಗ ಭರಮಪ್ಪ ಏನೋ ಹೇಳಲು ತವಕಿಸುತ್ತಿದ್ದ. ಇದನ್ನರಿತ ರಂಗರಾಜ “ಭರಮಪ್ಪನವರೆ ಹುಡುಗ ಹೇಗೆ?" ಎಂದು ಮಾತಿಗಾರಂಭಿಸಿದ. “ಹುಡುಗ ಒಳ್ಳೆಯವನೇ. ಪಾಪ ಬಡವ. ಇಷ್ಟೊಂದು ಮಾರ್ಕ್ಸ್ ತಗೀತಾನೆ ಅಂದಿದ್ದರೆ ನಾವು ಏನಾದರು ಸಹಾಯ ಮಾಡಬಹುದಿತ್ತು ಅಲ್ಲವಾ? ಆದರೂ ನೀನು ಸುದ್ದಿ ಮಾಡುವಾಗ ನಾವು ಆಗಾಗ ಸಹಾಯ ಮಾಡ್ತಿದ್ದಿವಿ ಅಂತ ಬರೆದು, ನಮ್ಮಿಬ್ಬರ ಹೆಸರು ಪತ್ರಿಕೇಲಿ ಬರೊಹಂಗೆ ಮಾಡ್ಬಿಡು. ಇದು ಪತ್ರಿಕೆಯವರಿಗೂ ಇಷ್ಟ ಆಗುತ್ತೆ. ‘ನಮ್ಮ ಪತ್ರಿಕಾ ಬಳಗದೋರು ಸೇವಾಮನೋಭಾವ ಇರೋರು’ ಅಂತ ತೋರಿಸಿಕೊಳ್ಳೋಕೆ ಅವರಿಗೂ ಇದೊಂದು ಅವಕಾಶ" ಎಂದು ನಿಂತು ರಂಗರಾಜನ ಮುಖವನ್ನೊಮ್ಮೆ ನೋಡಿದ.
ಭರಮಪ್ಪನ ಸಲಹೆ ರಂಗರಾಜನಿಗೂ ಇಷ್ಟವಾಯಿತು. ಆದರೂ ಏನೂ ಸಹಾಯ ಮಾಡದೆ, ಮಾಡಿದ್ದೇವೆ ಎಂದು ಬರೆಯುವುದು ಹೇಗೆ? ಎನ್ನಿಸಿ “ಭರಮಪ್ಪನವರೇ ನಾವು ಏನು ಸಹಾಯನೇ ಮಾಡಿಲ್ಲ. ನಾವು ಮಾಡಿದೀವಿ ಅಂತ ಬರೆಯೋದು. ನಾಳೆ ಅವನು ಮಾಡಿಲ್ಲ ಅನ್ನೋದು. ಆಗ ಮರ್ಯಾದೆ ಹೋಗೋದು ನಮ್ಮದೆ ತಾನೆ" ಎಂದ. “ಅದಕ್ಕೆ ನಾ ನಿಮ್ಮನ್ನ ದಡ್ಡರು ಅನ್ನೋದು. ಆ ಹುಡುಗನಿಗೆ ನಾ ಹೇಳ್ತಿನಿ. ‘ಪೇಪರ್‍ನಲ್ಲಿ ನಿನಗೆ ಸಹಾಯ ಮಾಡಿ ಅಂತ ಬರೀತಿವಿ. ನಿನಗೆ ಮುಂದೆ ಓದೋದಿಕ್ಕೆ ಹಣಕಾಸಿನ ಸಹಾಯ ಸಿಗೊ ಹಂಗೆ ಮಾಡ್ತೀವಿ. ನೀನು ಮಾತ್ರ ಯಾರಾದರು ಕೇಳಿದರೆ, ಭರಮಪ್ಪನವರು ರಂಗರಾಜು ಅವರು ಹೇಳೋದು ನಿಜ ಅಂತ ಹೇಳು’ ಅಂತ. ಅವನಿಗೂ ಸಹಾಯ ಬೇಕು ಹೇಳದೆ ಏನ್ಮಾಡ್ತಾನೆ" ಅಂದರು. ರಂಗರಾಜನಿಗೂ ಸರಿಯೆನ್ನಿಸಿ “ಆದರೆ ಯಾವ ರೀತಿ ಸಹಾಯ ಮಾಡಿದ್ವಿ ಅಂತ ಬರೆಯೋದು?" ಎಂದ.
“ಹುಡುಗನ ಪ್ರತಿಭೆಯನ್ನು ಗುರುತಿಸಿದ ಪತ್ರಿಕೆಯ ಈ ವರದಿಗಾರ ಹುಡುಗನಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದುಕೊಂಡು ಪತ್ರಿಕೆಯ ಏಜೆಂಟರಾದ ಶ್ರೀ ಭರಮಪ್ಪನವರ ಮನವೊಲಿಸಿ, ಪತ್ರಿಕೆ ಹಂಚಲು ಕೊಡುತ್ತಿದ್ದ ಕಮಿಷನ್ ಅಲ್ಲದೆ ದಿನಕ್ಕೊಂದು ಪತ್ರಿಕೆಯನ್ನು ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ನಮ್ಮ ಪತ್ರಿಕೆಯಲ್ಲಿ ಬರುತ್ತಿದ್ದ ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮಾರ್ಗದರ್ಶಿ’ ಎಂಬ ಲೇಖನದಿಂದ ಇಷ್ಟೊಂದು ಅಂಕ ಗಳಿಸಲು ಸಾದ್ಯವಾಯಿತು ಎಂದು ಜಯರಾಮ ಪ್ರತಿಕ್ರಿಯಿಸುತ್ತಾನೆ ಅಂತ ಬರೀರಿ. ಮುಂದಿನದನ್ನು ನಾನು ನೋಡ್ಕೋತಿನಿ" ಎಂದು ಭರಮಪ್ಪನವರೇ ವರದಿಗೊಂದು ರೂಪವನ್ನೂ ಕೊಟ್ಟುಬಿಟ್ಟರು.
ಎರಡು ದಿನಗಳ ನಂತರ ವಿಶ್ವಕನ್ನಡ ಪತ್ರಿಕೆಯ ಮುಖಪುಟದಲ್ಲಿ ‘ವಿಶ್ವಕನ್ನಡ ಪತ್ರಿಕೆ ಹಂಚುವ ಹುಡುಗನ ಸಾಧನೆ’ ಎಂಬ ತಲೆಬರಹದೊಂದಿಗೆ ಸುದ್ದಿ ಪ್ರಕಟವಾಗಿತ್ತು. ಪೂರ್ಣ ವರದಿಯ ಮಧ್ಯೆ ಬಾಕ್ಸ್ ಐಟಂನಲ್ಲಿ ವರದಿಗಾರ ಮತ್ತು ಏಜೆಂಟರ ಸೇವಾ ಮನೋಭಾವ, ಪತ್ರಿಕೆಯಿಂದ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಉಪಯೋಗದ ಬಗ್ಗೆ ಬರೆಯಲಾಗಿತ್ತು.
*    *   *  * * *  *   *    *
ಇವುಗಳೆಲ್ಲದರ ನಡುವೆ ಬಡ ಹುಡುಗನ ಶ್ರಮ ಕಳೆದು ಹೋಗಿತ್ತು.!
*    *   *  * * *  *   *    *

Monday, May 04, 2015

ಪೆಜತ್ತಾಯ ಸರ್, ನಿಮ್ಮದೇ ನೆನಪಲ್ಲಿ..........



ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್ತು ಶ್ರೀ ಎಸ್.ಎಂ. ಪೆಜತ್ತಾಯ ಅವರ ಪರಿಚಯದ ಬಗ್ಗೆ ಹೇಳಲೇಬೇಕೆನ್ನಿಸುತ್ತಿದೆ. ೨೦೦೮ರಲ್ಲಿ ಇರಬಹುದು. ತೇಜಸ್ವಿಯವರ ವೈಚಾರಿಕತೆ ಎನ್ನುವ ನನ್ನ ಲೇಖನ ಕನ್ನಡಧ್ವನಿ.ಕಾಂ ಆನ್ ಲೈನ್ ಪತ್ರಿಕೆಯಲ್ಲಿ ಎಂಟು ಕಂತುಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಬಂದು ಪ್ರತಿಕ್ರಿಯೆಗಳನ್ನು ಒಟ್ಟಾಗಿಸಿ ಶ್ರೀ ಗೋಪಿನಾಥ್‌ರಾವ್  ದೂರದ ದುಬೈನಿಂದ ನನಗೆ ಈ-ಮೇಲ್ ಕಳುಹಿಸಿದ್ದರು. ಅದರಲ್ಲಿ ಒಂದು ಪ್ರತಿಕ್ರಿಯೆ ಶ್ರೀ ಮಧುಸೂದನ ಪೆಜತ್ತಾಯ ಅವರದ್ದಾಗಿತ್ತು. ಕೇವಲ ನಾಲ್ಕೇ ಸಾಲಿದ್ದ ಅದು ನನಗೆ ವಿಶೇಷವಾಗಿ ಕಂಡಿದ್ದರಿಂದ, ಅವರಿಗೊಂದು ಈ-ಮೇಲ್ ತಕ್ಷಣ ಕಳುಹಿಸಿಬಿಟ್ಟೆ. ಆಶ್ಚರ್ಯ! ಕೇವಲ ಐದೇ ನಿಮಿಷದಲ್ಲಿ ಅದಕ್ಕೆ ಪ್ರತ್ಯುತ್ತರ ಬಂದಿತ್ತು. ಸ್ವತಃ ಪೆಜತ್ತಾಯ ಅವರೇ ತಮ್ಮ ಕಿರು ಪರಿಚಯ ಮಾಡಿಕೊಂಡು ಸ್ನೇಹಪೂರ್ವಕ ಈ-ಮೇಲ್ ಕಳುಹಿಸಿದ್ದರು.
ಹೀಗೆ ಅಂದು ಪ್ರಾರಂಭವಾದ ನಮ್ಮ ಈ-ಮೇಲ್ ಸ್ನೇಹ, ದಿನಕ್ಕೊಂದು ಒಮ್ಮೊಮ್ಮೆ ಎರಡು ಮೂರು ನಾಲ್ಕು ಈ-ಮೇಲ್‌ಗಳವರೆಗೂ ಬಂತು. ಅವರು ಬರೆದ ಇಂಗ್ಲಿಷ್ ಪುಸ್ತಕದ ನೂರಾರು ಪುಟಗಳನ್ನು ನನಗೆ ಈ-ಮೇಲ್ ಮುಖಾಂತರವೇ ಕಳುಹಿಸಿದ್ದರು. ನನ್ನ ಪುಸ್ತಕಗಳನ್ನು ಕೇಳಿ ಪಡೆದು ಓದಿ ಅದಕ್ಕೆ ತಮ್ಮ ಅನಿಸಿಕೆಯನ್ನೂ ಬರೆದರು. ಅತ್ಯಂತ ಸರಳ ನೇರ ಮಾತುಗಾರಿಕೆಯ ಮೂಲಕ ನನ್ನ ಆತ್ಮೀಯರಾದರು. ಕೃಷಿ ವ್ಯವಸಾಯ ಸಾಹಿತ್ಯ ಫೋಟೋಗ್ರಫಿ ಎಲ್ಲವುದರ ಬಗ್ಗೆಯೂ ತಮಗೆ ತಿಳಿದಿರುವುದನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪ್ರಸ್ತುತ ಪಡಿಸುವ ಅವರ ಶೈಲಿ ನನಗೆ ಅಚ್ಚುಮೆಚ್ಚಾಗಿತ್ತು. ನಂತರ ಅವರನ್ನು ಬೇಟಿ ಮಾಡದೇ, ಅವರ ತೋಟಕ್ಕೂ ಹೋಗಿ ಸುತ್ತಾಡಿಕೊಂಡು ಬರುವ ಯೋಗವೂ ಲಭಿಸಿತು. ಅಲ್ಲಿಂದ ಬಂದ ಮೇಲೆಯೇ ಅವರನ್ನು ಮುಖತಃ ಬೇಟಿಯಾಗಿದ್ದು. ನಮ್ಮಿಬ್ಬರ ನಡುವೆ ಇಪ್ಪತ್ತೈದು ವರ್ಷಗಳ ಅಂತರವಿದೆ. ಒಂದು ತಲೆಮಾರು ಆಗಿಹೋಗಿದೆ. ಆದರೆ ನಮಗೆಂದೂ ಆ ವಯಸ್ಸಿನ ಅಂತರ ಒಂದು ಸಮಸ್ಯೆಯೇ ಆಗಿಲ್ಲ.

ಅವರು ಸುಮ್ಮನೆ ಸಮಯ ಕಳೆಯಲು ಈ-ಮೇಲ್ ಕಳುಹಿಸುವುದಿಲ್ಲ. ಮಾಹಿತಿಯನ್ನು ಕೊಡಲು ಪಡೆಯಲು ಅದನ್ನು ಅವರು ಯಶಸ್ವಿಯಾಗಿ ಬಳಸುತ್ತಾರೆ. ಅವರಿಂದ ಬರುತ್ತಿದ್ದ ಕೆಲವೊಂದು ಈ-ಮೇಲ್ ಬರಹಗಳು ಒಳ್ಳೆಯ ಲೇಖನಗಳ ಕಚ್ಚಾರೂಪದಂತೆಯೇ ನನಗೆ ಕಾಣುತ್ತಿದ್ದವು. ಅದೊಂದು ದಿನ, ಹಾಗೆ ಬಂದ ಈ-ಮೇಲ್ ಬರಹವೊಂದನ್ನು ಲೇಖನದ ರೂಪಕ್ಕೆ ತಂದು ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಿದೆ. ತಕ್ಷಣ, ತುಂಬಾ ಚೆನ್ನಾಗಿದೆ. ನನ್ನ ಅಭಿಪ್ರಾಯ, ಭಾಷೆ ಯಾವುದಕ್ಕೂ ಧಕ್ಕೆ ಬಾರದ ಹಾಗೆ ಇಡೀ ಬರಹವನ್ನು ಲಲಿತಪ್ರಬಂದದಂತೆ ಬದಲಾಯಿಸಿರುವುದು ಖುಷಿಯಾಗಿದೆ ಎಂದರು. ನಾನು ಅದನ್ನು (ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!) ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ಕೇಳಿದೆ. ಸಂತೋಷದಿಂದಲೇ ಒಪ್ಪಿಗೆಯಿತ್ತರು. ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ಉತ್ತೇಜನಗೊಂಡು, ಇನ್ನೂ ಒಂದೆರಡು ಈ ಮೇಲ್‌ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಅವರ ಒಪ್ಪಿಗೆ ಪಡೆದು ಬ್ಲಾಗಿನಲ್ಲಿ ಹಾಕಿದ್ದೆ.
ಅದೊಂದು ದಿನ ಹೀಗೆ ಪ್ರಕಟವಾಗಿದ್ದ ಬರಹವೊಂದನ್ನು ನೋಡಿ, ಈ-ಮೇಲ್‌ನಲ್ಲಿ ತಮ್ಮ ಎಡಿಟಿಂಗ್ ಶಾಘನೀಯ. ನನ್ನ ಕನ್ನಡ ಬರಹಗಳೆನ್ನೆಲ್ಲಾ ತಮಗೆ ಒಪ್ಪಿಸುವ ಆಸೆ. ಜತೆಗೆ ಅವುಗಳ ಮೇಲಿನ ಸರ್ವ ಅಧಿಕಾರವನ್ನೂ! ಎಂದು ಬರೆದಿದ್ದರು. ನನಗೆ ಏನು ಹೇಳಬೇಕೆಂದು ತೋಚದೆ, ಅವರು ನನ್ನ ಮೇಲಿಟ್ಟ ನಂಬಿಕೆಗೆ ಮೂಕವಿಸ್ಮಿತನಾಗಿ ಸುಮ್ಮನಾಗಿಬಿಟ್ಟದ್ದೆ. ತಕ್ಷಣ ಬಂದ ಇನ್ನೊಂದು ಈ-ಮೇಲಿನಲ್ಲಿ ನನ್ನ ಎಲ್ಲಾ ಕನ್ನಡ ಬರಹಗಳ ಉತ್ತರಾಧಿಕಾರಿ ನೀವೆ! ನಿಮಗೆ ಹೇಗೆ ಬೇಕೋ ಹಾಗೇ ಅವನ್ನು ಬಳಸಿಕೊಳ್ಳಿ. ಅವುಗಳಲ್ಲಿ ನಾನು ಸತ್ಯವನ್ನು ಬಿಟ್ಟು ಬೇರೆ ಏನನ್ನೂ ಬರೆದಿಲ್ಲ. ಎಂದು ಬರೆದು ಅವರ ಕಂಪ್ಯೂಟರಿನಲ್ಲಿದ್ದ ಎಲ್ಲಾ ಕನ್ನಡ ಫೈಲುಗಳನ್ನು ಅಟ್ಯಾಚ್ ಮಾಡಿ ನನಗೆ ಕಳುಹಿಸಿದ್ದರು!
ನನಗೆ ಏನು ಮಾಡಬೇಕೆಂದು ತಕ್ಷಣಕ್ಕೆ ತೋಚಲಿಲ್ಲ. ಅವರ ಬರಹಗಳಟ್ಟುಕೊಂಡು ಏನು ಮಾಡುವುದು? ಇದೊಂದು ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಅವರ ಎಲ್ಲಾ ಬರಹಗಳನ್ನು ಪುಸ್ತಕಕ್ಕೆ ಅಳವಡಿಸಲು ಸಾಧ್ಯವಿರಲಿಲ್ಲ. ಆಗಾಗಲೇ ಅವರ ಕಾಗದದ ದೋಣಿಯಲ್ಲಿ ಸಾಕಷ್ಟು ಪ್ರಕಟವಾಗಿದ್ದವೂ ಕೂಡಾ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕೆಲವನ್ನಾದರೂ ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಲ್ಲವೇ? ಎಂಬ ಯೋಚನೆ ನನಗೆ ಯಾವಾಗ ಬಂತೋ, ಆಗಲೇ ಕಾರ್ಯಪ್ರವೃತ್ತನಾಗಿಬಿಟ್ಟೆ. ನಾನು ಅಷ್ಟೊತ್ತಿಗಾಗಲೇ ಈ-ಮೇಲ್‌ನಲ್ಲಿ ಬಂದ ಐದಾರು ಬರಹಗಳನ್ನು ಲೇಖನ ರೂಪದಲ್ಲಿ ಸಂಪಾದಿಸಿದ್ದೆ. ಅವುಗಳಿಗೆ ಪೂರಕವಾಗಿಯೇ ವಿಷಯವನ್ನು ಅರಸುತ್ತಾ ಕಾಗದದ ದೋಣಿ ಪುಸ್ತಕದಲ್ಲಿ ಪ್ರಕಟವಾಗದಿರುವ ಬರಹಗಳನ್ನು ಒಂದು ಕಡೆ ಕಲೆ ಹಾಕಿದೆ. ಅದು, ಅವರು ತಮ್ಮ ಪ್ರಾರಂಭದ ದಿನಗಳಲ್ಲಿ, ತಮ್ಮ ಅಕ್ಕ ಮತ್ತು ಭಾವನಿಗೋಸ್ಕರ, ತೋಟ ಮಾಡಲು ಶಿರೂರಿನಲ್ಲಿ ಕಳೆದ ಒಂದು ವರ್ಷದ ಜೀವನದ ಕಥೆಯಾಗಿತ್ತು! ಶಿರೂರಿನ ಒಂದು ವರ್ಷದ ಅವಧಿಯ ಅವರ ಬದುಕನ್ನು ತಮಗರಿವಿಲ್ಲದೇ ಅವರು ಅಕ್ಷರ ರೂಪಕ್ಕೆ ಇಳಿಸಿಬಿಟ್ಟಿದ್ದರು!

ಈ ಪುಸ್ತಕದಲ್ಲಿ ಇಪ್ಪತ್ತಮೂರು ಲೇಖನಗಳನ್ನು ಸಂಪಾದಿಸಿ, ಸಂಕಲಿಸಿದ್ದೇನೆ. ಮೊದಲ ಮತ್ತು ಕೊನೆಯ ಲೇಖನಗಳು ನೇರವಾಗಿ ಶಿರೂರಿನ ಬದುಕಿಗೆ ಸಂಬಂಧಿಸಿದವುಗಳಲ್ಲದಿದ್ದರೂ, ಪೂರಕ ಬರಹಗಳೇ ಆಗಿವೆ. ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!
ಸಾಹಿತ್ಯಲೋಕದ ಪರಿಭಾಷೆಯ ಬಗ್ಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ. ಜೀವನದ ಅನುಭವಗಳನ್ನು ಯಾವುದೇ ಸಾಹಿತ್ಯಕ ಮಾನದಂಡಗಳಿಲ್ಲದೇ ನೇರವಾಗಿ, ಸರಳವಾಗಿ, ಆದರೆ ಕುತೂಹಲಕಾರಿಯಾಗಿ ಪ್ರಸ್ತುಪಡಿಸುವುದರಲ್ಲೇ ಅವರ ಬರಹದ ಸೊಗಸಿದೆ. ಪ್ರತೀ ಬರಹದ ಹಿಂದೆ ಅವರ ಹುಡುಕಾಟದ ಗುಣವನ್ನು ನಾವು ಕಾಣಬಹುದಾಗಿದೆ.
ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇಲ್ಲ.
ಪ್ರತಿಯೊಂದು ಬರಹಗಳ ಬಗ್ಗೆ ಪ್ರತ್ಯೇಖವಾಗಿ ಇಲ್ಲಿ ಹೇಳುವ ಅಗತ್ಯವಿಲ್ಲ. ಪೆಜತ್ತಾಯರ ಬರಹಗಳಿಗೆ ಅಂತಹ ದಿಕ್ಸೂಚಿಯ ಅಗತ್ಯವೂ ಇಲ್ಲ. ಅಷ್ಟು ಚೆನ್ನಾಗಿ ಓದಿಸಿಕೊಂಡು ಹೋಗುವ ಅವರ ಲೇಖನಗಳ ಬಗ್ಗೆ ಬರೆದು ಪರಿಚಯ ಮಾಡಿಕೊಡುವುದೆಂದರೆ ಅದು ಅವರ ಬರಹಗಳಿಗೆ ಅಪಚಾರ ಮಾಡಿದಂತೆ ಎಂಬ ಎಚ್ಚರ ನನಗಿದೆ.


 ಸರ್ ನೀವು ರಿಟಾಯರ್ಡ್ ರೈತರಾದರೆ, ನಾನು ವೀಕೆಂಡ್ ರೈತ ಎಂದು ನಾನೊಮ್ಮೆ ಬರೆದಿದ್ದೆ. ಅದನ್ನು ಓದಿ ಹೌದು ನಾನು ದೈಹಿಕವಾಗಿ ರಿಟಾಯರ್ಡ್; ಆದರೆ ಮಾನಸಿಕವಾಗಿ ಎಂದೆಂದಿಗೂ ರೈತನೇ! ಈಗ ನೋಡಿ ಇಲ್ಲೇ ಕುಳಿತುಕೊಂಡು, ಕೃತಕವಾಗಿ ಕಾಫಿಯನ್ನು ಒಣಗಿಸುವ ಯಂತ್ರೋಪಕರಣವನ್ನು ನನ್ನ ತೋಟದಲ್ಲಿ ಹಾಕಿಸುತ್ತಿದ್ದೇನೆ ಎಂದು ಜೋರಾಗಿ ನಕ್ಕಿದ್ದರು. ವಯೋಸಹಜವಾದ ದೈಹಿಕ ನಿಶ್ಯಕ್ತಿಯಿಂದ ಬಳಲುತ್ತಿದ್ದರೂ, ಬೆಂಗಳೂರಿನಲ್ಲೇ ನೆಲೆಸಿದ್ದರೂ, ಅವರ ತೋಟದ ಒಂದಿಂಚೂ ಅವರ ಕಣ್ಣೆದುರಿನಿಂದ ಮರೆಯಾಗಿಲ್ಲ. ಅಷ್ಟೊಂದು ದೊಡ್ಡ ತೋಟದ ಪ್ರತಿಯೊಂದನ್ನೂ ಅವರು ನಿಭಾಯಿಸುವ ರೀತಿ ನನ್ನಂತಹ ಕಿರಿಯರಿಗೆ ಆದರ್ಶನೀಯ. ಅವುಗಳೆಲ್ಲದರ ನಡುವೆ ಈಗಲೂ, ಜ್ಞಾನದ ಹುಡುಕಾಟವನ್ನೂ ಬಿಟ್ಟಿಲ್ಲ. ಚೀನಾದ ಸಿಲ್ಕ್ ರೂಟ್ ಬಗ್ಗೆ ಬರೆಯುತ್ತಾರೆ. ಕಾಫಿಗಿಡದ ಖಾಯಿಲೆಯ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿ ತೆಗೆದು ಲೇಖನ ಬರೆಯುತ್ತಾರೆ. ನೇಪಾಳ ಪ್ರವಾಸದ ನೆನಪನ್ನೂ ಬಿಚ್ಚಿಡುತ್ತಾರೆ. ಹೀಗೆ ಪೆಜತ್ತಾಯ ಅವರದು ದಣಿವರಿಯದ ದೊಡ್ಡ ಜೀವ. ತಾವು ರೈತರಾಗಿ, ತಮ್ಮ ರೈತ ಬದುಕಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ನನ್ನಂತಹ ಕಿರಿಯರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ ಪೆಜತ್ತಾಯ ಅವರದು. ಅವರ ಪ್ರಭಾವದಿಂದಲೇ ನಾನು ಇಂದು ವಾರಾಂತ್ಯದ ರೈತನಾಗಿ, ನನ್ನ ತೋಟದಲ್ಲಿ ದುಡಿಮೆಯ ಸಂತೋಷವನ್ನು ಅನುಭವಿಸುತ್ತಿದ್ದೇನೆ.
(ರೈತನಾಗುವ ಹಾದಿಯಲ್ಲಿ ಕೃತಿಯ ಸಂಪಾದಕರ ಮಾತುಗಳು)